ಪಟಿಯಾಲ (ಪಂಜಾಬ್): 1988ರ ರೋಡ್ ರೇಜ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅಭಿಮಾನಿಗಳಿಗೆ ನಿರಾಶೆಯಾಗಿದೆ. ಪಂಜಾಬ್ನ ಪಟಿಯಾಲ ಜೈಲಿನಲ್ಲಿರುವ ಸಿಧು ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಮಾಜಿ ಕ್ರಿಕೆಟಿಗರಾದ ಸಿಧು ರಿಲೀಸ್ ಆಗಿಲ್ಲ. ಈ ಬಗ್ಗೆ ಸ್ವತಃ ಪತ್ನಿಯೇ ಖಚಿತ ಪಡಿಸಿದ್ದಲ್ಲದೇ, ಜೈಲಿನಿಂದ ಪತಿಯನ್ನು ಬಿಡುಗಡೆ ಮಾಡದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಿಧು ಜೈಲಿನಿಂದ ಬಿಡುಗಡೆಯಾಗದ ಬಗ್ಗೆ ಡಾ. ನವಜೋತ್ ಕೌರ್ ಸಿಧು ಟ್ವೀಟ್ ಮಾಡಿ, ನವಜೋತ್ ಸಿಂಗ್ ಸಿಧು ಕ್ರೂರ ಪ್ರಾಣಿಗಳ ವರ್ಗಕ್ಕೆ ಸೇರಿದ್ದಾರೆ ಎಂದು ಭಾವಿಸಿರುವ ಸರ್ಕಾರ, ಸಿಂಧು ಅವರಿಗೆ 75ನೇ ವರ್ಷದ ಸ್ವಾತಂತ್ರ್ಯ ಪರಿಹಾರ ವಿಸ್ತರಿಸಲು ಬಯಸಿಲ್ಲ. ನೀವೆಲ್ಲರೂ ಸಿಧು ಅವರಿಂದ ದೂರವಿರಲು ವಿನಂತಿಸಲಾಗಿದೆ ಎಂದು ಪೋಸ್ಟ್ವೊಂದನ್ನು ಮಾಡಿದ್ದಾರೆ.
ಸನ್ನಡತೆ ಆಧಾರದ ಮೇಲೆ ಬಿಡುಗಡೆ ನಿರೀಕ್ಷೆ ಇತ್ತು: ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಆಗಿರುವ ನವಜೋತ್ ಸಿಂಗ್ ಸಿಧು ರೋಡ್ ರೇಜ್ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಕಳೆದ ಮೇ ತಿಂಗಳಿಂದ ಜೈಲಿನಲ್ಲಿದ್ದಾರೆ. ಇದುವರೆಗೆ 7 ತಿಂಗಳು ಜೈಲು ವಾಸ ಅನುಭವಿಸಿರುವ ಸಿಧು ಸನ್ನಡತೆ ಆಧಾರದ ಮೇಲೆ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಲಿದ್ದಾರೆ ಎಂಬ ನಿರೀಕ್ಷೆ ಇತ್ತು.
ಸಿಧು ಕುಟುಂಬಸ್ಥರು, ಅಭಿಮಾನಿಗಳಿಗೆ ನಿರಾಶೆ: ಸನ್ನಡತೆ ಆಧಾರದ ಬಿಡುಗಡೆ ಮಾಡಬೇಕಾದ ಕೈದಿಗಳ ಶಿಫಾರಸು ಪಟ್ಟಿಯನ್ನು ಕಾರಾಗೃಹ ಇಲಾಖೆಯು ಪಂಜಾಬ್ ಸರ್ಕಾರಕ್ಕೆ ರವಾನಿಸಿತ್ತು. ಇದರಲ್ಲಿ ನವಜೋತ್ ಸಿಂಗ್ ಸಿಧು ಹೆಸರನ್ನೂ ಉಲ್ಲೇಖಿಸಲಾಗಿದೆ ಎಂದೂ ವರದಿಯಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸಿಧು ಬಿಡುಗಡೆಯನ್ನು ಮುಂದೂಡಲಾಗಿದೆ. ಇದು ಸಿಧು ಕುಟುಂಬಸ್ಥರು, ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ದೊಡ್ಡ ನಿರಾಶೆಯನ್ನು ಉಂಟು ಮಾಡಿದೆ.
ಅದ್ದೂರಿ ಸ್ವಾಗತಕ್ಕೆ ಸಜ್ಜಾಗಿದ್ದ ಫ್ಯಾನ್ಸ್: ದೇಶದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ಬಿಡುಗಡೆಯಾಗುವುದು ಬಹುತೇಕ ಖಚಿತ ಎಂದೇ ಅಭಿಮಾನಿಗಳು ಭಾವಿಸಿದ್ದರು. ಹೀಗಾಗಿ ಸಿಧುಗೆ ಭವ್ಯವಾದ ಸ್ವಾಗತವನ್ನು ಕೋರಲು ಸಹ ಫ್ಯಾನ್ಸ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇಷ್ಟೇ ಅಲ್ಲ, ಬಿಡುಗಡೆಯ ನಂತರ ಸಿಧು ಹಾದು ಹೋಗುವ ಮಾರ್ಗದ ನಕ್ಷೆಯನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೈಲಿನಿಂದ ಬರುವ ಸಿದ್ದು ಅವರನ್ನು ಸ್ವಾಗತಿಸುವಂತೆ ಜನತೆಗೂ ಮನವಿ ಮಾಡಿದ್ದರು.
ಸಿಧು ರೋಡ್ ರೇಜ್ ಪ್ರಕರಣ ಹಿನ್ನೆಲೆ: 1988ರಲ್ಲಿ ಪಾರ್ಕಿಂಗ್ ವಿಷಯದ ಬಗ್ಗೆ ಗಲಾಟೆ ನಡೆದಿತ್ತು. ಇದರಲ್ಲಿ ನವಜೋತ್ ಸಿಂಗ್ ಸಿಧು ಜೊತೆ ಜಗಳವಾಡಿದ ನಂತರ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಈ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದ್ದರೂ, ಗಲಾಟೆ ವೇಳೆ ತೀವ್ರ ಆ ವ್ಯಕ್ತಿಗೆ ಗಾಯಗಳಾಗಿದ್ದವು ಎನ್ನಲಾಗಿತ್ತು. ಈ ಪ್ರಕರಣವನ್ನು ಆರಂಭದಲ್ಲಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು. ಆದರೆ, ನಂತರ 2006ರ ಡಿಸೆಂಬರ್ನಲ್ಲಿ ಹೈಕೋರ್ಟ್ ಸಿದ್ದು ಮತ್ತು ಸಹಚರ ಸಂಧುಗೆ ತಲಾ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿತ್ತು.
ಈ ಘಟನೆ ನಡೆದಾಗ ಕ್ರಿಕೆಟಿಗರಾಗಿದ್ದ ಸಿಧು, ಹೈಹೋರ್ಟ್ ಶಿಕ್ಷೆ ಪ್ರಕಟಿಸುವ ಸಂದರ್ಭದಲ್ಲಿ ರಾಜಕೀಯ ಪ್ರವೇಶಿಸಿದ್ದರು. ಇದಾದ ನಂತರ ಹೈಕೋರ್ಟ್ ಆದೇಶವನ್ನು ಸಿಧು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರ ಮಧ್ಯೆ ಸಿಧು ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದರ ನಂತರ 2018ರಲ್ಲಿ ಸುಪ್ರೀಂಕೋರ್ಟ್ ಸಿಧುರನ್ನು ಸೆಕ್ಷನ್ 323ರ ಅಡಿಯಲ್ಲಿ ತಪ್ಪಿತಸ್ಥ ಘೋಷಿಸಿ, ಸಾವಿಗೆ ಸಂಬಂಧಿಸಿದಂತೆ 304ರಡಿ ತಪ್ಪಿತಸ್ಥರಲ್ಲ ಎಂದು ತೀರ್ಪು ನೀಡಿತ್ತು. ಹೀಗಾಗಿ ದಂಡ ವಿಧಿಸಿ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ಅದೇ 2018ರಲ್ಲಿ ಈ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು. 2022ರಂದು ಮೇ ತಿಂಗಳಲ್ಲಿ ಸುಪ್ರೀಂ ತನ್ನ ಈ ಹಿಂದಿನ ತೀರ್ಪಿಗೆ ತಡೆ ನೀಡುವ ಮೂಲಕ ಸಿಧು ಅವರನ್ನು ಜೈಲಿಗೆ ಕಳುಹಿಸಿತ್ತು.
ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಜನವರಿ 26 ರಂದು ಜೈಲಿನಿಂದ ಬಿಡುಗಡೆ ಆಗ್ತಾರಾ?