ಕಾಸರಗೋಡು(ಕೇರಳ) : ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಸುತ್ತಿರುವ ವೇಳೆ ಹೆಬ್ಬಾವಿನ ಮೊಟ್ಟೆಗಳು ಕಂಡು ಬಂದ ಹಿನ್ನೆಲೆಯಲ್ಲಿ 54 ದಿನ ಕಾಮಗಾರಿಯನ್ನೇ ತಡೆ ಹಿಡಿದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಯುಎಲ್‌ಸಿಸಿ ನಡೆಸುತ್ತಿರುವ ಹೆದ್ದಾರಿ ವಿಸ್ತರಣೆ ಕಾಮಗಾರಿಯ ವೇಳೆ ದೊಡ್ಡ ರಂಧ್ರದಲ್ಲಿ ಹೆಬ್ಬಾವಿನ ಮೊಟ್ಟೆಗಳು ಕಂಡು ಬಂದಿವೆ.
ಈ ವೇಳೆ ಪರಿಶೀಲಿಸಿದಾಗ 24 ಮೊಟ್ಟೆಗಳು ಅಲ್ಲಿದ್ದವು. ಮೊಟ್ಟೆಗಳು ಒಡೆಯುವ ಹಂತಕ್ಕೆ ಬಂದಿದ್ದ ಕಾರಣ ಅವುಗಳನ್ನು ಅಲ್ಲಿಂದ ತೆರವು ಮಾಡಿದರೆ ಹಾನಿಯಾಗುವ ಸಾಧ್ಯತೆ ಇದ್ದ ಕಾರಣ ರಸ್ತೆ ಕಾಮಗಾರಿಯನ್ನೇ ನಿಲ್ಲಿಸಲಾಗಿದೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿ ಮೊಟ್ಟೆಗಳು ಮರಿಯಾಗುವವರೆಗೂ ಕಾಮಗಾರಿ ನಿಲ್ಲಿಸಲು ಸೂಚಿಸಿದ್ದಾರೆ.
ಕಾಮಗಾರಿ ವೇಳೆ ಮೊಟ್ಟೆಗಳಿಗೆ ಹಾನಿಯಾದರೆ ಕಾನೂನು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ. ಹೆಬ್ಬಾವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ 1ರಲ್ಲಿ ಸೇರಿಸಲಾಗಿದೆ. ಅವುಗಳ ಜೀವಕ್ಕೆ ಹಾನಿ ಉಂಟು ಮಾಡಿದರ ಕಾನೂನು ಕ್ರಮಕ್ಕೆ ಸೂಚಿಸಲಾಗುತ್ತದೆ.
ಇದರಿಂದಾಗಿ ಆ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಮೊಟಕುಗೊಳಿಸಿದ ಯುಎಲ್‌ಸಿಸಿ, ಅರಣ್ಯಾಧಿಕಾರಿಗಳ ಜೊತೆಗೆ 54 ದಿನಗಳ ಕಾಲ ಮೊಟ್ಟೆಗಳ ಮೇಲೆ ನಿಗಾ ಇಟ್ಟಿತ್ತು. 24 ಮೊಟ್ಟೆಗಳಲ್ಲಿ ಕೆಲವು ಮರಿಗಳಾಗಿ ಹೊರ ಬಂದಿವೆ. ಇನ್ನುಳಿದ ಮೊಟ್ಟೆಗಳನ್ನು ಅರಣ್ಯ ಇಲಾಖೆಯ ಹಾವುಗಳ ರಕ್ಷಕರಾಗಿರುವ ಅಡುಕ್ಕತ್‌ಬಯಲ್ ಅಮೀನ್ ಅವರು ಎಲ್ಲಾ ಮೊಟ್ಟೆಗಳನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ.
54 ದಿನಗಳ ಆರೈಕೆಯ ನಂತರ ಎಲ್ಲಾ 24 ಮೊಟ್ಟೆಗಳು ಮರಿಗಳಾಗಿವೆ. ನಂತರ ಮರಿ ಹೆಬ್ಬಾವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸಿ ಕಾಡಿಗೆ ಬಿಟ್ಟಿದ್ದಾರೆ.
ಓದಿ: ಬರ್ತಡೇ ಪಾರ್ಟಿ ಎಂದು ಹೇಳಿ, 35 ವರ್ಷದ ವ್ಯಕ್ತಿ ಜೊತೆಗೆ 12ರ ಬಾಲೆ ಮದುವೆ!