ಬಂಡಿಪೋರಾ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಕಾಶ್ಮೀರಿ ಪಂಡಿತ್ ಕುಟುಂಬದ ವ್ಯಕ್ತಿಯೊಬ್ಬರ ಅಂತಿಮ ವಿಧಿ ವಿಧಾನಗಳನ್ನು ನೆರೆಹೊರೆಯ ಮುಸ್ಲಿಂ ಬಾಂಧವರು ನೆರವೇರಿಸಿದ್ದಾರೆ.
ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಕುಟುಂಬದ ಮನೆಯಲ್ಲಿ ವೃದ್ಧೆಯೊಬ್ಬರು ತೀರಿಕೊಂಡಿದ್ದರು. ಆ ಕುಟುಂಬದ ಅಕ್ಕಪಕ್ಕದಲ್ಲಿರುವ ಮುಸ್ಲಿಂರು ಆ ವೃದ್ಧೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ದಿ. ಕಾಶಿನಾಥ್ ಭಟ್ ಎಂಬುವರ ಪತ್ನಿ ರತನ್ ರಾಣಿ ಭಟ್ ಗುರುವಾರ ರಾತ್ರಿ ಬಂಡಿಪೋರಾದ ಅಜರ್ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ತಕ್ಷಣ ನೆರೆಹೊರೆಯ ಮುಸ್ಲಿಂ ಬಾಂಧವರು ಒಟ್ಟುಗೂಡಿ ಹಿಂದೂ ಧರ್ಮದ ವಿಧಿ ವಿಧಾನದ ಪ್ರಕಾರ ರಾಣಿ ಭಟ್ ಅವರ ಅಂತಿಮ ಸಂಸ್ಕಾರ ನಡೆಸಿದ್ದಾರೆ.
ಈಟಿವಿ ಭಾರತದ ಜತೆ ಮಾತನಾಡಿದ ರಾಣಿ ಭಟ್ ಅವರ ಪುತ್ರ ನೆರೆಹೊರೆಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದು ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾಗಿದ್ದರೂ ತಾನು ಮತ್ತು ಅವರ ಕುಟುಂಬ ಸದಸ್ಯರು ಎಂದಿಗೂ ಪ್ರತ್ಯೇಕವಾಗಿರಲಿಲ್ಲ ಎಂದು ಹೇಳಿದ್ದಾರೆ.
![Muslim neighbours perform last rites of Kashmiri Pandit woman in Bandipora](https://etvbharatimages.akamaized.net/etvbharat/prod-images/muslimsperformlastritesofkashmiripanditwomeninbandipora_04062021172835_0406f_1622807915_110_0406newsroom_1622816911_296.jpg)
"ನಾನು ಇಲ್ಲಿ ನೆರೆಹೊರೆಯವರಿಗೆ ಕೃತಜ್ಞನಾಗಿದ್ದೇನೆ. ನಾವು ಎಂದಿಗೂ ಕಾಶ್ಮೀರವನ್ನು ತೊರೆದಿಲ್ಲ ಎಂದು ನನಗೆ ಸಂತೋಷವಾಗಿದೆ. ನಾವು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ ಮತ್ತು ನಮ್ಮ ನಡುವೆ ಶಾಂತಿ ಮತ್ತು ಸಹೋದರತೆ ಇದೆ" ಎಂದು ಹೇಳಿದ್ದಾರೆ.
ಸ್ಥಳೀಯ ಮುಸ್ಲಿಂರು ರಾಣಿ ಭಟ್ ಅವರ ಅಂತಿಮ ಪಯಣಕ್ಕೆ ಹೆಗಲು ನೀಡಿದ್ದಾರೆ. ಅಂತ್ಯಕ್ರಿಯೆಗೆ ಮರದ ಕಟ್ಟಿಗೆ ವ್ಯವಸ್ಥೆ ಮಾಡಿದ್ದಾರೆ. ಹಲವಾರು ಸ್ಥಳೀಯರು ಸಂತಾಪ ಸೂಚಿಸಲು ಅವರ ನಿವಾಸಕ್ಕೆ ಸಹ ಭೇಟಿ ನೀಡಿದ್ದಾರೆ. ಇದು ಸಮಾಜದಲ್ಲಿನ ಭ್ರಾತೃತ್ವಕ್ಕೆ ಉತ್ತಮ ಉದಾಹರಣೆ ಎಂದರೆ ತಪ್ಪಲ್ಲ.