ಭೂಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮಂಗಳವಾರ ದಿನಿ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಡಿ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಎಂಬವರನ್ನು ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮೂತ್ರ ವಿಸರ್ಜನೆ ಮಾಡಿರುವ ಈ ವಿಡಿಯೋ ತನ್ನದಲ್ಲ ಎಂದು ಸಂತ್ರಸ್ತನೇ ನಿರಾಕರಿಸಿದ್ದಾನೆ!.
ಅಷ್ಟೇ ಅಲ್ಲ, ಆರೋಪಿಯ ತಂದೆ ಮತ್ತು ಕುಟುಂಬಸ್ಥರು ವೈರಲ್ ವಿಡಿಯೋ ನಕಲಿ ಎಂದು ಹೇಳಿದ್ದಾರೆ. ತಮ್ಮ ಮಗ ಬಿಜೆಪಿ ಪ್ರತಿನಿಧಿ ಎಂಬ ಕಾರಣಕ್ಕೆ ರಾಜಕೀಯ ಪಿತೂರಿಯಿಂದ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ ಎಂದು ಪ್ರವೇಶ್ ಶುಕ್ಲಾ ತಂದೆ ಮತ್ತು ಕುಟುಂಬಸ್ಥರು ದೂರಿದ್ದಾರೆ.
'ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ': ಮೂತ್ರ ವಿಸರ್ಜನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ವೈರಲ್ ಆದ ಮೂತ್ರ ವಿಸರ್ಜನೆಯ ವಿಡಿಯೋ ತನ್ನದಲ್ಲ ಎಂದು ಹೇಳಿದ್ದಾನೆ. ಇದು ನನ್ನ ವಿಡಿಯೋ ಅಲ್ಲ, ಇದುವರೆಗೂ ನನಗೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದಿದ್ದು, ಇದನ್ನು ಕೇಳಿದ ಪೊಲೀಸರು ಗಾಬರಿಗೊಂಡಿದ್ದಾರೆ. ಸಂತ್ರಸ್ತ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿತ್ತು. ಆದರೆ ಆರೋಗ್ಯಕರವಾಗಿರುವುದಾಗಿ ಪೊಲೀಸರು ಖಚಿತಪಡಿಸಿದ್ದಾರೆ. ಪ್ರಸ್ತುತ ವಶಕ್ಕೆ ಪಡೆದಿರುವ ಶುಕ್ಲಾರನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ.
ಪ್ರವೇಶ್ ಶುಕ್ಲಾ ವಿರುದ್ಧ ಬಹಾರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294, 504 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರವೇಶ್ ಶುಕ್ಲಾ ಬಿಜೆಪಿ ಶಾಸಕ ಕೇದಾರನಾಥ್ ಶುಕ್ಲಾ ಅವರೊಂದಿಗೆ ಗುರುತಿಸಿಕೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಶಾಸಕರಿಗೆ ಪ್ರಶ್ನಿಸಿದಾಗ, ಪ್ರವೇಶ್ ಶುಕ್ಲಾ ತಮಗೆ ಗೊತ್ತಿಲ್ಲ ಎಂದು ಹೇಳಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರವೇಶ್ ಶುಕ್ಲಾ ತಂದೆ ರಮಾಕಾಂತ್ ಶುಕ್ಲಾ, "ನನ್ನ ಮಗ ಶಾಸಕರ ಪ್ರತಿನಿಧಿಯಾಗಿದ್ದಾನೆ, ಆದ್ದರಿಂದಲೇ ರಾಜಕೀಯ ಪಿತೂರಿಗೆ ಬಲಿಯಾಗುತ್ತಿದ್ದಾನೆ, ಅವನು ಹತ್ಯೆಗೊಳಗಾಗಬಹುದು ಎಂಬ ಭಯ ನನಗಿದೆ" ಎಂದು ಹೇಳಿದ್ದಾರೆ.
ಇನ್ನು ಆರೋಪಿಯ ಸಂಬಂಧಿಕರು, “2 ವರ್ಷಗಳ ಹಿಂದಿನ ಹಳೆಯ ವಿಡಿಯೋ ಆದ ಇದನ್ನು ಎಡಿಟ್ ಮಾಡಿ ವೈರಲ್ ಮಾಡುವುದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಹಣ ನೀಡದೇ ಇದ್ದ ಕಾರಣ ವಿಡಿಯೋ ಹರಿಬಿಟ್ಟಿದ್ದಾರೆ. ಚುನಾವಣೆ ಸಮೀಸುತ್ತಿದ್ದು, ಅದಕ್ಕಾಗಿ ಹೀಗೆ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Man Urinating: ಬುಡಕಟ್ಟು ವ್ಯಕ್ತಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ