ಉತ್ತರಕಾಶಿ(ಉತ್ತರಾಖಂಡ): ತಮಿಳುನಾಡಿನ ಕುನೂರು ಎಂಬಲ್ಲಿ ನಿನ್ನೆ ನಡೆದ ಭೀಕರ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿ 13 ಮಂದಿ ಸಾವಿಗೀಡಾಗಿದ್ದು, ದೇಶಾದ್ಯಂತ ದುಃಖ ಮಡುಗಟ್ಟಿದೆ.
ಜನರಲ್ ಬಿಪಿನ್ ರಾವತ್ ತಾವು ಉನ್ನತ ಶಿಕ್ಷಣ ಪಡೆದ ತವರು ರಾಜ್ಯ ಉತ್ತರಾಖಂಡದ ಉತ್ತರ ಕಾಶಿಯಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿಪಡಿಸಬೇಕೆಂಬ ಕನಸು ಹೊಂದಿದ್ದರು. ಇಲ್ಲಿನ ಪೌರಿ ನಿವಾಸಿಯಾದ ರಾವತ್, 2019ರ ಸೆಪ್ಟೆಂಬರ್ನಲ್ಲಿ ತಮ್ಮ ಪತ್ನಿಯೊಂದಿಗೆ ಉತ್ತರಕಾಶಿಯ ಥಾಟಿಗೆ ಆಗಮಿಸಿದ್ದರು. ಅಲ್ಲಿನ ಜನರೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕುಹಾಕಿದ ರಾವತ್, ಅಲ್ಲಿಯೇ ನೆಲೆಯೂರುವುದಾಗಿಯೂ ಹೇಳಿದ್ದರು ಎಂದು ಸೋದರ ಸಂಬಂಧಿ ನರೇಂದ್ರ ಪರ್ಮಾರ್ ಹೇಳಿದರು.
ಉತ್ತರಕಾಶಿ ಪ್ರದೇಶದಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿಪಡಿಸಲು ಸರ್ಕಾರದ ಜೊತೆ ಕೆಲಸ ಮಾಡುವುದಾಗಿ ಬಿಪಿನ್ ರಾವತ್ ಭರವಸೆ ನೀಡಿದ್ದರಂತೆ. ಇದಕ್ಕಾಗಿ ಡೆಹ್ರಾಡೂನ್ನಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಜಲವಾಯು ವಿಹಾರ್ ಎಂಬಲ್ಲಿರುವ ಸಿಲ್ವರ್ ಹೈಟ್ಸ್ ಕಣಿವೆಯ ಬಳಿ ಕಟ್ಟಡವೊಂದನ್ನು ನಿರ್ಮಾಣ ಮಾಡುತ್ತಿದ್ದರು.
ವಾರದ ಹಿಂದಷ್ಟೇ ಈ ಕಟ್ಟಡದ ನಿರ್ಮಾಣ ಕಾರ್ಯ ಆರಂಭವಾಗಿದೆ. ಬಿಪಿನ್ ಪತ್ನಿ ಮಧುಲಿಕಾ ರಾವತ್ ಕಟ್ಟಡಕ್ಕೆ ಅಡಿಪಾಯವೂ ಹಾಕಿದ್ದರು. ಆದರೆೆ ಈಗ ಬಿಪಿನ್ ರಾವತ್ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ಕಟ್ಟಡದ ಕಾಮಗಾರಿ ನಿಂತು ಹೋಗಿದೆ. ಇಡೀ ಪ್ರದೇಶದಲ್ಲಿ ಹತಾಶೆಯ ವಾತಾವರಣ ಆವರಿಸಿದೆ ಎಂದು ಸ್ಥಳೀಯರಾಗಿರುವ ನಿವೃತ್ತ ಭೂ ವಿಜ್ಞಾನಿ ಕೆ.ಎಸ್.ಮಿಶ್ರಾ ಹೇಳುತ್ತಾರೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ: ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ವಿಧಿವಶ!