ಸಿಧಿ (ಮಧ್ಯಪ್ರದೇಶ) : ತನ್ನ ಮಗನನ್ನು ಹುಲಿ ಬಾಯಿಂದ ಬಿಡಿಸಿಕೊಳ್ಳಲು ಏಕಾಂಗಿಯಾಗಿ ಕಾದಾಡಿದ ಮಧ್ಯಪ್ರದೇಶದ ಮಹಿಳೆಯೊಬ್ಬಳ ಶೌರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಬರಿಜಾಹರಿಯಾ ಗ್ರಾಮಕ್ಕೆ ಭಾನುವಾರ ಸಂಜೆ ನುಗ್ಗಿದ ಹುಲಿಯೊಂದು ಬೈಗಾ ಬುಡಕಟ್ಟು ಜನಾಂಗದ ಕಿರಣಾ ಎಂಬ ಮಹಿಳೆಯ 8 ವರ್ಷದ ಮಗ ರಾಹುಲ್ನನ್ನು ಕಚ್ಚಿಕೊಂಡು ಹೋಗಿದೆ. ಇದನ್ನು ಕಂಡು ಕಿರುಚುತ್ತಾ ಹುಲಿ ಹಿಂದೆಯೇ ಮಹಿಳೆ ಬರಿಗಾಲಿನಲ್ಲೇ ಒಂದು ಕಿಲೋ ಮೀಟರ್ ಓಡಿದ್ದಾರೆ.
ಇದನ್ನೂ ಓದಿ: Watch... ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಿಸಿದ ಅಥಣಿ ಅಗ್ನಿಶಾಮಕ ದಳ ಸಿಬ್ಬಂದಿ
ಮನೆಯಿಂದ ಒಂದು ಕಿ.ಮೀ ದೂರದಲ್ಲಿ ಬಂದು ಕುಳಿತ ಹುಲಿ ನನ್ನ ಮಗನನ್ನು ತನ್ನ ಉಗುರುಗಳಲ್ಲಿ ಹಿಡಿದು ಕುಳಿತಿದ್ದನ್ನು ನೋಡಿದೆ. ಬರಿಗೈಯಲ್ಲೇ ಹುಲಿಯೊಂದಿಗೆ ಕಾದಾಡಿದೆ. ಅಷ್ಟರಲ್ಲೇ ಮಗನನ್ನು ಹುಲಿ ಗಾಯಗೊಳಿಸಿತ್ತು.
ನನ್ನ ಮೇಲೂ ಹುಲಿ ದಾಳಿ ನಡೆಸಲು ಮುಂದಾಗಿದ್ದಾಗ ಈ ವೇಳೆ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ. ಇದನ್ನು ಕಂಡ ಹುಲಿ ಅಲ್ಲಿಂದ ಪರಾರಿಯಾಗಿದೆ. ಈ ವೇಳೆಗಾಗಲೇ ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಎಚ್ಚರಗೊಂಡಾಗ ಆಸ್ಪತ್ರೆಯಲ್ಲಿದ್ದೆ ಎಂದು ಕಿರಣಾ ಹೇಳುತ್ತಾರೆ.
ಬಾಲಕನ ಬೆನ್ನು, ಕೆನ್ನೆ ಮತ್ತು ಕಣ್ಣಿಗೆ ಗಾಯಗಳಾಗಿವೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಯ ವೆಚ್ಚವನ್ನು ಪ್ರಾದೇಶಿಕ ಪ್ರವಾಸೋದ್ಯಮ ಅಧಿಕಾರಿ ವಾಸಿಂ ಭುರಿಯಾ ಅವರೇ ಭರಿಸಿದ್ದಾರೆ.