ಕಾಮರೆಡ್ಡಿ(ತೆಲಂಗಾಣ) : ಲಾಡ್ಜ್ನಲ್ಲಿ ವೃದ್ಧ ತಾಯಿ ಮತ್ತು ಆಕೆಯ ಮಗ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ರಾಮಯಂಪೇಟದ ನಿವಾಸಿಗಳಾದ ಪದ್ಮ (65) ಹಾಗೂ ಮಗ ಸಂತೋಷ್ (40) ಎಂಬುವರೇ ಮೃತರೆಂದು ಗುರುತಿಸಲಾಗಿದೆ.
ಏ.11ರಂದು ಚಿಕಿತ್ಸೆಗೆಂದು ಕಾಮರೆಡ್ಡಿ ಜಿಲ್ಲಾ ಕೇಂದ್ರಕ್ಕೆ ಪದ್ಮ ಬಂದಿದ್ದರು. ಅಲ್ಲಿಂದ ತಾಯಿ ಮತ್ತು ಮಗ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು. ಆದರೆ, ಶನಿವಾರ ಬೆಳಗಿನ ಜಾವ ಇಬ್ಬರೂ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ. ಕೊಠಡಿಯಿಂದ ಹೊಗೆ ಹೊರ ಬಂದ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ಎಚ್ಚೆತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಪೊಲೀಸರು ಬಂದು ಬಾಗಿಲು ಮುರಿದು ಒಳಗಡೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೂ ವಿಡಿಯೋ ಹೇಳಿಕೆ ದಾಖಲು : ಆತ್ಮಹತ್ಯೆಗೂ ಮುನ್ನ ತಾಯಿ ಮತ್ತು ಮಗ ಇಬ್ಬರೂ ಮಾತನಾಡಿ, ವಿಡಿಯೋ ಹೇಳಿಕೆ ದಾಖಲು ಮಾಡಿದ್ದಾರೆ. ಸಂತೋಷ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ. ಇತ್ತೀಚಿಗೆ ಭೂಮಿ ಮಾರಾಟ ವಿಷಯವಾಗಿ ಕೆಲ ಸ್ಥಳೀಯ ಜನ ಪ್ರತಿನಿಧಿಗಳು ತಮಗೆ 50 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.
ನಮ್ಮ ಕುಟುಂಬ ಸದಸ್ಯರಿಗೂ ತೊಂದರೆ ಕೊಡುತ್ತಿದ್ದಾರೆ. ಇದರಿಂದ ನಾವು ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ. ಅಲ್ಲದೇ, ತಮ್ಮ ಸಾವಿಗೆ ಏಳು ಜನ ಕಾರಣರೆಂದು ಡೆತ್ ನೋಟ್ ಸಹ ಬರೆದಿಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಉಪಹಾರದಲ್ಲಿ ಉಪ್ಪು ಹೆಚ್ಚಾಗಿದ್ದಕ್ಕೆ ಹೆಂಡ್ತಿಯನ್ನೇ ಕೊಲೆಗೈದ ಗಂಡ!