ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಬಳಿಕ ಪಂಜಾಬ್ನಲ್ಲೂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ) ಗೆಲುವಿನ ನಗೆ ಬೀರಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡ ಆಮ್ ಆದ್ಮಿ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಅಭಿನಂದಿಸಿದ್ದಾರೆ. ಜೊತೆಗೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಪಕ್ಷಕ್ಕೆ ಕೊಡುವ ಭರವಸೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ, ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಗವಂತ್ ಮಾನ್ ಗೆಲುವು ಸಾಧಿಸಿದ್ದು, ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ಮೂಲಕ ಕೇವಲ ಹತ್ತು ವರ್ಷಗಳಲ್ಲೇ ಉತ್ತರ ಭಾರತದಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಎಎಪಿ ದಿಟ್ಟ ಹೆಜ್ಜೆಯನ್ನಿಡುತ್ತಿದೆ.
ಇದನ್ನೂ ಓದಿ: ಹತ್ತು ವರ್ಷದಲ್ಲೇ ಬದಲಾದ ಮನ್ ಹಣೆಬರಹ: ಪಂಜಾಬ್ ಸಿಎಂ ಗದ್ದುಗೆ ಏರಲಿದ್ದಾರೆ ಕಾಮಿಡಿಯನ್!
ಸರಣಿ ಟ್ವೀಟ್‌ಗಳ ಮೂಲಕ ಪಿಎಂ ಮೋದಿ ಮತದಾರರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಪಂಜಾನ್ನಲ್ಲಿ ಗೆದ್ದಿದ್ದಕ್ಕಾಗಿ ಆಪ್ ಅನ್ನು ಅಭಿನಂದಿಸಿದರು. ಪಂಜಾಬ್‌ನ ಕಲ್ಯಾಣಕ್ಕಾಗಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ಎಎಪಿಗೆ ಕೊಡುವುದಾಗಿ ಪ್ರಧಾನಿ ಭರವಸೆ ನೀಡಿದರು.
ಮತ್ತೊಂದು ಟ್ವೀಟ್‌ನಲ್ಲಿ, "ಯುಪಿ, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಜನರು ಭಾರತೀಯ ಜನತಾ ಪಾರ್ಟಿ ಮೇಲೆ ಹೆಚ್ಚಿನ ಪ್ರೀತಿಯನ್ನಿರಿಸಿದ್ದಾರೆ. ಈ ರಾಜ್ಯಗಳ ಜನರಿಗೆ ನನ್ನ ಕೃತಜ್ಞತೆಗಳು. ನಮ್ಮ ಪಕ್ಷವು ನಿಮ್ಮ ಈ ಆಶೀರ್ವಾದಗಳನ್ನು ಗೌರವಿಸುತ್ತದೆ ಮತ್ತು ಈ ರಾಜ್ಯಗಳ ಅಭಿವೃದ್ಧಿಗೆ ಶ್ರಮಿಸುತ್ತದೆ" ಎಂದು ಅಭಯ ನೀಡಿದ್ದಾರೆ.