ಇಟಾನಗರ (ಅರುಣಾಚಲ ಪ್ರದೇಶ): ಅರುಣಾಚಲಪ್ರದೇಶದಲ್ಲಿ ಇಂದು (ಮಂಗಳವಾರ) ದೊಡ್ಡ ಪ್ರಮಾಣದ ಬೆಂಕಿ ಅನಾಹುತ ಸಂಭವಿಸಿತು. ಇಟಾನಗರದ ನಹರ್ಲಗೂನ್ ಪ್ರಮುಖ ಮಾರುಕಟ್ಟೆ ಸಂಪೂರ್ಣವಾಗಿ ಬೆಂಕಿಗೆ ಬೆಂದು ಹೋಗಿದೆ. ಇಲ್ಲಿದ್ದ 700 ಅಂಗಡಿಗಳು ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸುವಲ್ಲಿ ವಿಫಲವಾದ ಅಗ್ನಿಶಾಮಕದಳದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಎಂದಿನಂತೆ ನಹರ್ಲಗೂನ್ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭವಾಗಿತ್ತು. ಬೆಳಗ್ಗೆ ಮಾರುಕಟ್ಟೆಯಲ್ಲಿನ 2 ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ 20 ಮೀಟರ್ ದೂರವಿದ್ದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
2 ಗಂಟೆಗಳ ಕಾಲ ಅಂಗಡಿಗಳು ಬೆಂಕಿಗೆ ಧಗಧಗಿಸಿದರೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಲಿಲ್ಲ. ಬೆಂಕಿಯ ವೇಗ ಹೆಚ್ಚಿ ಪಕ್ಕದಲ್ಲಿದ್ದ ಅಂಗಡಿಗಳಿಗೂ ವ್ಯಾಪಿಸಿದೆ. ಹೀಗೆ ಅಲ್ಲಿದ್ದ ಏಳುನೂರು ಅಂಗಡಿಗಳನ್ನು ಅಗ್ನಿದೇವ ಆಹುತಿ ಪಡೆದಿದ್ದಾನೆ.
ಸಮೀಪವೇ ಇದ್ರೂ ಬಾರದ ಅಗ್ನಿಶಾಮಕ ದಳ: ಅಂಗಡಿಗಳು ಹೊತ್ತಿ ಉರಿಯುತ್ತಿದ್ದ ಮಾಹಿತಿ ತಿಳಿದರೂ 20 ಮೀಟರ್ನಷ್ಟೇ ದೂರವಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ 700 ವ್ಯಾಪಾರಿ ಅಂಗಡಿಗಳು ಬೆಂಕಿ ಸುಟ್ಟು ಭಸ್ಮವಾದವು ಎಂದು ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರಣ ಕೂಡ ತಿಳಿದುಬಂದಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿಯನ್ನು ವಜಾ ಮಾಡಬೇಕು. ಸರ್ಕಾರ ಪರಿಹಾರ ನೀಡಬೇಕು ಎಂದು ಅಂಗಡಿ ಕಳೆದುಕೊಂಡ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 20 ರೂಪಾಯಿ ಹರಿದ ನೋಟಿಗಾಗಿ ಜಡೆಜಗಳ: ಮಹಿಳೆ ಸಾವು