ಚೆನ್ನೈ: ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ 16 ವರ್ಷದ ಬಾಲಕಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು, ಆದರೆ ಆಕೆಯ ಅರ್ಜಿಯನ್ನು ಪೀಠ ವಜಾಗೊಳಿಸಿದೆ. ಈ ಹಿಂದೆ ಹೆಚ್ಚಿನ ಬುದ್ಧಿ ಸಾಮರ್ಥ್ಯ (high Intelligence Quotient) ಹೊಂದಿದ್ದ ಈ ಬಾಲಕಿಯನ್ನು 7 ರಿಂದ 9, ಮತ್ತು ನೇರವಾಗಿ 12 ನೇ ತರಗತಿಗೆ ಪ್ರವೇಶ ಮಾಡಲಾಗಿತ್ತು.
ಆ ಬಳಿಕ ನೀಟ್ ಪರೀಕ್ಷೆ ಬರೆಯಲು ಸಹ ಸಾಮರ್ಥ್ಯ ಹೊಂದಿದ್ದಾಳೆ ಎಂದು ಪರಿಗಣಿಸಿ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ವಯಸ್ಸಿನ ಆಧಾರದ ಮೇಲೆ ಅರ್ಜಿಯನ್ನು ವಜಾಗೊಳಿಸಲಾಗಿದೆ. ನೀಟ್ ಪರೀಕ್ಷೆ ಬರೆಯಲು ಕಡ್ಡಾಯವಾಗಿ 17 ವರ್ಷವಾಗಿರಬೇಕು.
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಮತ್ತು ಕೃಷ್ಣನ್ ರಾಮಸಾಮಿ ಅವರಿದ್ದ ವಿಭಾಗೀಯ ನ್ಯಾಯಪೀಠವು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸೂಚಿಸಿದ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ನ್ಯಾಯಾಲಯಗಳು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ವೈದ್ಯಕೀಯ ಕೋರ್ಸ್‌ಗಳಿಗೆ ಸೇರಲು ಒಂದು ನಿರ್ದಿಷ್ಟ ಮಟ್ಟದ ಪ್ರಬುದ್ಧತೆಯ ಅಗತ್ಯವಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಡಿದ ಮಾನದಂಡಗಳನ್ನು ಉಲ್ಲೇಖಿಸಿದರು. ಅರ್ಜಿದಾರರಾದ ಕುಂಭಕೋಣಂನ ವಿದ್ಯಾರ್ಥಿನಿ ಶ್ರೀಹರಿಣಿ ಮೇ 4, 2005 ರಂದು ಜನಿಸಿದ್ದಾರೆ. ಈ ಅರ್ಜಿಯು ವಯಸ್ಸಿನ ಮಾನದಂಡವನ್ನು ಪ್ರಶ್ನಿಸದೇ, ಶೈಕ್ಷಣಿಕ ಪ್ರತಿಭೆಯ ಆಧಾರದ ಮೇಲೆ ವಿನಾಯಿತಿ ನೀಡಬೇಕು. ನೀಟ್ ಪರೀಕ್ಷೆ ಬರೆಯಲು ಅನುಮತಿಸಬೇಕು ಎಂದು ಆಕೆಯ ವಕೀಲರು ಅರ್ಜಿ ಸಲ್ಲಿಸಿದ್ದರು.