ತಿರುವನಂತಪುರಂ (ಕೇರಳ): ಹದಿಹರೆಯದ ವಯಸ್ಸಿನಲ್ಲಿ ಯುವಕ-ಯುವತಿಯರಿಗೆ ಪ್ರೀತಿ-ಪ್ರೇಮ ಭಾವನಾತ್ಮಕ ಅನುಭವ ಕೊಡುತ್ತೆ. ಅನೇಕರು ಇದೇ ಪ್ರೀತಿಯಲ್ಲಿ ಬಿದ್ದು ಯಶಸ್ವಿಯಾಗಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ ಅನೇಕರು ಅದ್ಭುತ ಪ್ರೇಮಕಾವ್ಯ ರಚಿಸಲು ಹೋಗಿ ವೈಫಲ್ಯ ಅನುಭವಿಸಿ ಸೋತು, ಗೆದ್ದು ಬದುಕುತ್ತಿದ್ದಾರೆ. ಆದರೆ ಕೇರಳದಲ್ಲಿ ಪ್ರೀತಿ ವೈಫಲ್ಯ ಸೇಡು ತೀರಿಸಿಕೊಳ್ಳುವ ಕೃತ್ಯಗಳಿಗೆ ಕಾರಣವಾಗಿ ಗಂಭೀರ ಸ್ವರೂಪ ಪಡೆದುಕೊಂಡ ಅನೇಕ ನಿದರ್ಶನಗಳಿವೆ.
ಕೇರಳದಲ್ಲಿ ಪ್ರೀತಿ, ಪ್ರೇಮದ ವಿಚಾರದಲ್ಲಿ ಕಳೆದ 4 ವರ್ಷಗಳಲ್ಲಿ 350 ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮ ಪ್ರೀತಿಯ ಪ್ರಸ್ತಾಪ ಒಪ್ಪಿಕೊಳ್ಳದಿದ್ದಕ್ಕೆ 10 ಮಂದಿ ಯುವತಿಯರನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ. ಉಳಿದ 340 ಮಂದಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಂಕಿಅಂಶ ಬಿಡುಗಡೆ ಮಾಡಿದ್ದಾರೆ.
ಕಳೆದ ವರ್ಷ ಪ್ರೀತಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಇಬ್ಬರು ಯುವತಿಯರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು. ತಮ್ಮ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿಲ್ಲ ಎಂದು ಕಿಡಿಗೇಡಿಗಳು ಈ ಯುವತಿಯರ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಕಳೆದ ವರ್ಷ ಪ್ರೇಮದ ವಿಚಾರದಲ್ಲಿ 96 ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷದ ಶಾಸಕ ಎಂ.ಕೆ.ಮುನೀರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವೆ, 2019ರಲ್ಲಿ ತಮ್ಮ ಪ್ರೀತಿ ಒಪ್ಪಿಕೊಂಡಿಲ್ಲ ಎಂದು ಐವರು ಯುವತಿಯರನ್ನು ಹತ್ಯೆ ಮಾಡಲಾಗಿದೆ. 88 ಯುವತಿಯರು ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018ರಲ್ಲಿ 76 ಯುವತಿಯರು ಸಾವಿಗೆ ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇರಳ: ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ಡಬಲ್ ಜೀವಾವಧಿ ಶಿಕ್ಷೆ
ಭೀಭತ್ಸ ಕೃತ್ಯಗಳಿಗೆ ಉದಾಹಣೆಗಳು:
1. ಯುವತಿಗೆ 22 ಬಾರಿ ಚಾಕುವಿನಿಂದ ಇರಿದು ಕೊಲೆ:
2021ರ ಜೂನ್ 17 ರಂದು ಮಲಪ್ಪುರಂ ಜಿಲ್ಲೆಯ ಇಲನಾಡ್‌ನಲ್ಲಿ 21 ವರ್ಷದ ಯುವತಿಗೆ 22 ಬಾರಿ ಚಾಕುವಿನಿನಂದ ಇರಿದು ಹತ್ಯೆ ಮಾಡಲಾಗಿತ್ತು. ತನ್ನ ಪ್ರೀತಿಯ ಪ್ರಸ್ತಾಪವನ್ನು ಒಪ್ಪಿಕೊಳ್ಳದಿದ್ದಕ್ಕೆ ಯುವಕ ಕ್ರೌರ್ಯ ಎಸಗಿದ್ದ. ಈ ಘಟನೆಯಲ್ಲಿ ಮೃತ ಯುವತಿಯ 13 ವರ್ಷದ ಸಹೋದರಿಯೂ ಗಾಯಗೊಂಡಿದ್ದಳು. ಮೃತ ಯುವತಿ ಹಾಗೂ ಹತ್ಯೆ ಮಾಡಿದ ಯುವತಿ ಚಿಕ್ಕಂದಿನಿಂದಲೂ ಪರಿಚಿತರಾಗಿದ್ದರು.
2. ಪ್ರಿಯತಮೆಯನ್ನು ಗುಂಡು ಹಾರಿಸಿ ಕೊಂದ ಭಗ್ನ ಪ್ರೇಮಿ
2021ರ ಜುಲೈ 30 ರಂದು ಕೊತ್ತಮಂಗಲಂನಲ್ಲಿ ದಂತ ವಿದ್ಯಾರ್ಥಿನಿಯನ್ನು ಭಗ್ನ ಪ್ರೇಮಿ ಗುಂಡು ಹಾರಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದ. ಹೀಗೆ ಕೇರಳದಲ್ಲಿ ನಡೆದಿರುವ ಹಲವು ಪ್ರರಣಗಳ ಬಗ್ಗೆ ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.