ಕೊರಾಪುಟ್( ಒಡಿಶಾ): ಸನ್ನಿವೇಶಗಳು ಮನುಷ್ಯನನ್ನು ಹೇಗೆಲ್ಲ ಇಕ್ಕಟ್ಟಿಗೆ ಸಿಲುಕಿಸುತ್ತವೆ ಎಂದು ಹೇಳಲು ಬರುವುದಿಲ್ಲ. ಒಮ್ಮೊಮ್ಮೆ ಬದುಕಲ್ಲಿ ಬಿರುಗಾಳಿಯೇ ಎದ್ದು ಬಿಡುತ್ತದೆ. ಹೌದು ಇಂತಹದ್ದೊಂದು ವಿಚಿತ್ರ ಸನ್ನಿವೇಶ ಒಡಿಶಾದ ಕೊರಾಪುಟ್ನ ಮಹಿಳೆಯೊಬ್ಬರಿಗೆ ಎದುರಾಗಿದೆ. ಕೊರಾಪುಟ್ ಜಿಲ್ಲೆಯ ಬಿ ಸಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಡಪದರ್ ಗ್ರಾಮದಲ್ಲಿ ವಿಧವೆಯೊಬ್ಬರು ಮರುಮದುವೆ ಆಗಿರುವ ಘಟನೆ ನಡೆದಿದೆ.
ಹೌದು ಇಂತಹದ್ದೊಂದು ಘಟನೆಗೆ ಹಿನ್ನೆಲೆ ಏನು?: ಘಾಸಿ ಅಮಾನತ್ಯ ಮತ್ತು ಇತರ ಕೆಲವು ಸ್ಥಳೀಯರು ಕೆಲಸ ಹುಡುಕಿಕೊಂಡು ಎರಡು ವರ್ಷಗಳ ಹಿಂದೆ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಆದರೆ, ದಾರಿ ಮಧ್ಯೆ ಘಾಸಿ ನಾಪತ್ತೆಯಾಗಿದ್ದರು. ಅವರ ಸ್ನೇಹಿತರು ದಿನಗಟ್ಟಲೆ ಘಾಸಿಯನ್ನೆ ಎಲ್ಲ ಕಡೆ ಹುಡುಕಾಡಿದ್ದರು. ಆದರೆ ಘಾಸಿ ಅವರಿಗೆಲ್ಲ ಸಿಗಲೇ ಇಲ್ಲ. ಹುಡುಕಿ - ಹುಡುಕಿ ಸುಸ್ತಾದ ಇವರು ನಂತರ ಸುಮ್ಮನಾಗಿ ಬಿಟ್ಟಿದ್ದರು.
ಹೀಗೆ ಸುಮಾರು ಎಂಟು ತಿಂಗಳಕಾಲ ಘಾಸಿಗಾಗಿ ಎಲ್ಲೆಡೆ ಹುಡುಕಾಡಿದ ಬಳಿಕ ಘಾಸಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬಕ್ಕೆ ಸ್ನೇಹಿತರು ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ ಘಾಸಿಯ ಕುಟುಂಬ ಮತ್ತು ಸಂಬಂಧಿಕರು ಗ್ರಾಮದಲ್ಲಿ ಘಾಸಿಯ ಸಾಂಕೇತಿಕ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು. ಅತ್ತ ಆತನ ಪತ್ನಿ ಸುವರ್ಣ ವಿಧವೆಯಾಗಿ ಜೀವನ ಸಾಗಿಸುತ್ತಿದ್ದರು.
ಗಂಡನ ಕಳೆದುಕೊಂಡಿದ್ದೇನೆ ಎಂದಿದ್ದ ಸುವರ್ಣಾಗೆ ಅಚ್ಚರಿ: ಹೀಗೆ ಗಂಡನಿಲ್ಲದೇ ಜೀವನ ಸಾಗಿಸುತ್ತಿದ್ದ ಪತ್ನಿ ಸುವರ್ಣಾಗೆ ಒಂದು ದಿನ ಅಚ್ಚರಿ ಕಾದಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಗಂಡ ಮನೆಗೆ ಹಿಂದಿರುಗಿದ್ದ. ಗಂಡನ ಆಗಮನ ಪತ್ನಿ ಹಾಗೂ ಗ್ರಾಮಸ್ಥರಿಗೆ ಅಚ್ಚರಿಯನ್ನುಂಟು ಮಾಡಿತ್ತು. ಘಾಸಿ ತಾನು ತಪ್ಪಿಸಿಕೊಂಡಿದ್ದು, ಮತ್ತೆ ವಾಪಸ್ ಮನೆಗೆ ಬರಲು ಪಟ್ಟ ಕಷ್ಟವನ್ನು ಗ್ರಾಮಸ್ಥರು, ಪತ್ನಿ ಹಾಗೂ ಸ್ನೇಹಿತರಿಗೆ ಎಳೆ ಎಳೆಯಾಗಿ ವಿವರಿಸಿದ್ದ.
ಸಭೆ ಕರೆದ ಗ್ರಾಮಸ್ಥರು: ನಂತರ ಗ್ರಾಮದ ಹಿರಿಯರು ಸಭೆ ಕರೆದರು. ಸಂಪ್ರದಾಯದಂತೆ ಘಾಸಿ ತನ್ನ ಪತ್ನಿ ಸುವರ್ಣಳನ್ನು ಮರುಮದುವೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಿದರು. ಹಿರಿಯರು ನಿರ್ಧರಿಸಿದಂತೆ ಅಂತಿಮವಾಗಿ ಸ್ಥಳೀಯ ಶಿವ ದೇವಾಲಯದಲ್ಲಿ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸುವರ್ಣ ಮತ್ತು ಘಾಸಿ ಮರು ವಿವಾಹ ಮಾಡಿಕೊಂಡಿದ್ದಾರೆ.
ಇದನ್ನು ಓದಿ:ಪೂರ್ವಜರ ಮನೆ ತೊರೆದು ₹40 ಕೋಟಿ ವೆಚ್ಚದ ಬಂಗಲೆಗೆ ಶೀಘ್ರವೇ 'ದಾದಾ' ಶಿಫ್ಟ್..