ಖುಂಟಿ(ಜಾರ್ಖಂಡ್): ನವರಾತ್ರಿಯಲ್ಲಿ ಇಡೀ ದೇಶವೇ ಹೆಣ್ಣು ಮಗಳನ್ನು ಪೂಜಿಸುತ್ತಿದೆ. ಆದರೆ, ಇಲ್ಲಿ ಮಾನವ ಕಳ್ಳಸಾಗಣೆಗೆ ಬಲಿಯಾದವರನ್ನು ಖುಂಟಿ ಪೊಲೀಸರ ತಂಡ ಪತ್ತೆ ಹಚ್ಚಿದೆ. ಖುಂಟಿ ಎಸ್ಪಿ ಅಮನ್ ಕುಮಾರ್ ರಚಿಸಿದ್ದ ವಿಶೇಷ ತಂಡ ರಾಜಸ್ಥಾನ, ಹರಿಯಾಣ, ಯುಪಿ ಮತ್ತು ದೆಹಲಿಯಲ್ಲಿದ್ದ ಬಾಲಕಿಯರನ್ನು ರಕ್ಷಿಸಿದೆ.
ಈಗಾಗಲೇ ತಂಡ ರಕ್ಷಿಸಿರುವ ಹುಡುಗಿಯರು ಚೇತರಿಸಿಕೊಂಡಿದ್ದು, ಇವರೆಲ್ಲ ಖುಂಟಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳು. ಈ ಹುಡುಗಿಯರನ್ನು ಅವರ ಸಂಬಂಧಿಕರೇ ಇತರ ರಾಜ್ಯಗಳಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಕಳ್ಳಸಾಗಣೆ ಜಾಲ ಬೆನ್ನಟ್ಟಿದ್ದ ಎಸ್ಪಿ: ಮಾನವ ಕಳ್ಳಸಾಗಣೆಯ ಕಿಂಗ್ ಪನ್ನಾಲಾಲ್ ಮಹತೋ ಎನ್ನಲಾಗಿದೆ. ಈ ಜಿಲ್ಲೆಯ ಅನೇಕ ಹೆಣ್ಣುಮಕ್ಕಳನ್ನು ದೇಶದ ರಾಜದಾನಿ, ದೊಡ್ಡ ನಗರಗಳಿಗೆ ಕಳ್ಳಸಾಗಣೆದಾರರು ಮಾರಾಟ ಮಾಡಿದ್ದಾರೆ. ಮಾನವ ಕಳ್ಳಸಾಗಣೆ ತಡೆ ಘಟಕ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಿತ್ತು.
ಆ ಬಳಿಕ ಎಸ್‌ಪಿ ಈ ಸಂಬಂಧ ಆರು ಮಂದಿಯ ತಂಡವನ್ನು ರಚನೆ ಮಾಡಿ ಸೆ.15ರಂದು ವಿವಿಧ ರಾಜ್ಯಗಳಿಗೆ ಕಳುಹಿಸಿದ್ದರು. ಈ ತಂಡವು ರಾಜಸ್ಥಾನ, ಹರಿಯಾಣ, ಯುಪಿ ಮತ್ತು ದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದಾಳಿ ಮಾಡುವ ಮೂಲಕ 18 ಬಾಲಕಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ವಿವಿಧ ರಾಜ್ಯಗಳಲ್ಲಿ ವಿಶೇಷ ತಂಡಗಳಿಂದ ದಾಳಿ: ದೆಹಲಿ, ಯುಪಿ, ಹರಿಯಾಣ ಮತ್ತು ರಾಜಸ್ಥಾನ ಪೊಲೀಸರು ಮಾತ್ರವಲ್ಲದೇ ಸ್ಥಳೀಯ ಎನ್ಜಿಒಗಳು ಕಾರ್ಯಾಚರಣೆ ಯಶಸ್ವಿಯಾಗುವಲ್ಲಿ ಖುಂಟಿ ಪೊಲೀಸರಿಗೆ ಸಹಕರಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಖುಂಟಿ ಪೊಲೀಸರು ಆನಂದ್ ಬಿಹಾರ, ರೋಹಿಣಿ, ಶಕುರ್‌ಪುರ್, ಯುಪಿಯ ಗಾಜಿಯಾಬಾದ್ ಮತ್ತು ಹರಿಯಾಣದ ಗುರ್‌ಗಾಂವ್ ಪ್ರದೇಶಗಳಲ್ಲಿ ದಾಳಿ ನಡೆಸುವ ಮೂಲಕ ಬಾಲಕಿಯರನ್ನು ಮಾನವ ಕಳ್ಳಸಾಗಣೆಯಿಂದ ಕಾಪಾಡಿದ್ದಾರೆ.
ಖುಂಟಿಯ ಮಾನವ ಕಳ್ಳಸಾಗಣೆದಾರ ಪನ್ನಾ ಲಾಲ್ ಅವರನ್ನು 2019ರಲ್ಲಿ ಪೊಲೀಸರು ಬಂಧಿಸಿದ್ದು, ಅವರ ಹೇಳಿಕೆಯ ಮೇರೆಗೆ ದೆಹಲಿಯ ವಿವಿಧ ಪ್ರದೇಶಗಳಿಂದ 11 ಬಾಲಕಿಯರನ್ನು ಬಂಧಿಸಲಾಗಿದೆ. ಶಕುರ್‌ಪುರ ಪ್ರದೇಶವನ್ನು ಪನ್ನಾ ಲಾಲ್ ಮಹತೋ ತನ್ನ ಅಡಗುತಾಣವನ್ನಾಗಿ ಮಾಡಿಕೊಂಡು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದ.
ಅದನ್ನು ಇಡಿ ವಶಪಡಿಸಿಕೊಂಡಿದೆ. ಪ್ರಸ್ತುತ ಎನ್‌ಐಎ ಪನ್ನಾ ಲಾಲ್ ಮಹ್ತೋ ಪ್ರಕರಣದ ತನಿಖೆ ನಡೆಸುತ್ತಿದೆ. ಚೇತರಿಸಿಕೊಂಡಿರುವ ಬಾಲಕಿಯರನ್ನು ಶೀಘ್ರವೇ ಜಿಲ್ಲೆಗೆ ಕರೆತರಲಾಗುವುದು ಎಂದು ಜಿಲ್ಲಾ ಎಸ್‌ಪಿ ಅಮನ್‌ಕುಮಾರ್ ತಿಳಿಸಿದ್ದಾರೆ.
ಗಿರಿದಿಹ್ ಪೊಲೀಸರಿಂದ ಕ್ರಮ: ಸೋಮವಾರ, ಗಿರಿಡಿ ಪೊಲೀಸರು ಮಾನವ ಕಳ್ಳಸಾಗಣೆ ಗ್ಯಾಂಗ್‌ನ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೇರೆ ರಾಜ್ಯಕ್ಕೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ ಬಾಲಕಿಯೊಬ್ಬಳನ್ನು ಆರೋಪಿಯ ಬಲೆಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಿರಿದಿಹ್ ಪೊಲೀಸರು ಬಯಲಿಗೆಳೆದ ಗ್ಯಾಂಗ್ನಲ್ಲಿ ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಆರೋಪಿಗಳಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಪೊಲೀಸರು ವಶಪಡಿಸಿಕೊಂಡಿರುವ ಬಾಲಕಿಯನ್ನು ಪಚಂಬಾ ಪೊಲೀಸ್ ಠಾಣೆ ವ್ಯಾಪ್ತಿಯ ನರೋಬಾದ್ ಗ್ರಾಮದಿಂದ ಮೂರು ತಿಂಗಳ ಹಿಂದೆ ಅಪಹರಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಗ್ಯಾಂಗ್ ಪತ್ತೆ ಹಚ್ಚಿದ್ದಾರೆ. ಈ ಗ್ಯಾಂಗ್ನಲ್ಲಿ ಬಂಗಾಬಾದ್‌ನ ಮೀನಾದೇವಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಮೀನಾ ದೇವಿ ತನ್ನ ಸಹಚರರಲ್ಲಿ ಒಬ್ಬರಾದ ಬಿಹಾರದ ಗಯಾದ ಲಲಿತಾ ಕುಮಾರಿ ಮತ್ತು ಶಂಕರ್ ಚೌಧರಿ ಎಂಬುವರೊಂದಿಗೆ ಸೇರಿ ರಾಜಸ್ಥಾನಕ್ಕೆ ಬಾಲಕಿಯನ್ನು ಮಾರಾಟ ಮಾಡಲು ಯೋಜಿಸಿದ್ದರು. ಇದಾದ ನಂತರ ಪಚ್ಚಂಬ ಠಾಣೆಯ ಪೊಲೀಸರು ಹಲವೆಡೆ ದಾಳಿ ನಡೆಸಿ ದಂಧೆಗೆ ಸಂಬಂಧಿಸಿದ ಹತ್ತಾರು ಮಂದಿಯನ್ನು ಬಂಧಿಸಿದ್ದಾರೆ ಎಂದು ಗಿರಿದಿಹ್ ಎಎಸ್ಪಿ ಹರೀಶ್ ಬಿನ್ ಜಮಾನ್ ತಿಳಿಸಿದ್ದಾರೆ.
ಮದುವೆ ಹೆಸರಲ್ಲಿ ಹುಡುಗಿಯರ ಮಾರಾಟ: ಈ ಗ್ಯಾಂಗ್ ಮದುವೆ ಹೆಸರಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಅನೇಕ ಹುಡುಗಿಯರನ್ನು ಮಾರಾಟ ಮಾಡಿದೆ. ಸದ್ಯ ಬಂಧಿಸಿರುವ ಎಲ್ಲ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಬಿಹಾರದ ಗಯಾದ ಸೈದ್‌ಪುರ ನಿವಾಸಿ ಭೋಲಾ ಕುಮಾರ್ ದಾಸ್, ಗಿರಿದಿಹ್‌ನ ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬಡಿದಿಹ್ ಗ್ರಾಮದ ಗೋವಿಂದ್ ಸಾಹು, ಮೀನಾ ದೇವಿ ಮತ್ತು ಗಿರಿದಿಹ್‌ನ ಲಲಿತಾ ಕುಮಾರಿ, ಗಯಾದ ಬೆಳಗಂಜ್ ನಿವಾಸಿ ಶಂಕರ್ ಚೌಧರಿ, ಮಧ್ಯಪ್ರದೇಶದ ನೀಮುಚ್ ಹಾಗೂ ರಾಜಸ್ಥಾನದ ಉದಯಪುರ ನಿವಾಸಿಗಳಾದ ಸಂದೀಪ್ ಶರ್ಮಾ, ರಾಜು ಶರ್ಮಾ, ಹೇಮಂತ್ ಶರ್ಮಾ, ಮುಕೇಶ್ ಗುರ್ಜಾರ್ ಮತ್ತು ದಲಿಚಂದ್ ಶರ್ಮಾ, ದಿನೇಶ್ ಶರ್ಮಾ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡಿಜಿ ಕೊಲೆ ಕೇಸ್.. ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ, ಮನೆಗೆಲಸದವನೇ ಪ್ರಮುಖ ಆರೋಪಿ