ನವದೆಹಲಿ: ತಮ್ಮ ಉದ್ದೇಶಿತ ಕೊಲೆ ದಂಧೆಯನ್ನು ಮುಂದುವರಿಸುವ ಉದ್ದೇಶದಿಂದ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಪಂಜಾಬ್, ಉತ್ತರ ಪ್ರದೇಶ, ಎನ್‌ಸಿಆರ್ ಮತ್ತು ರಾಜಸ್ಥಾನದಲ್ಲಿ ಶಾರ್ಪ್ ಶೂಟರ್‌ಗಳನ್ನು ನೇಮಿಸಿಕೊಳ್ಳುತ್ತಿವೆ ಎಂಬ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ತನಿಖೆಯಿಂದ ತಿಳಿದುಬಂದಿದೆ. ಶಾರ್ಪ್ ಶೂಟರ್‌ಗಳನ್ನು ಗುರುತಿಸಲು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಸ್ಥಳೀಯ ದರೋಡೆಕೋರರು ಮತ್ತು ಡ್ರಗ್ ಡೀಲರ್‌ಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಏಜೆನ್ಸಿ ಮೂಲಗಳು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿವೆ.
ಲಷ್ಕರ್-ಎ-ತೊಯ್ಬಾದೊಂದಿಗೆ ಬಲವಾದ ಸಂಪರ್ಕ ಹೊಂದಿರುವ ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ಅರ್ಶ್‌ದೀಪ್ ಅಲಿಯಾಸ್ ಅರ್ಶ್‌ದೀಪ್ ದಲ್ಲಾ, ಈ ಕುರಿತಾದ ಸಂಪೂರ್ಣ ನೇಮಕಾತಿ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾನೆ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ. ಭಾರತದಲ್ಲಿ ಖಲಿಸ್ತಾನಿ ಚಳವಳಿಗೆ ವಿರೋಧ ವ್ಯಕ್ತಪಡಿಸಿದ ಪಂಜಾಬ್‌ನ ಹಲವಾರು ಹಿಂದೂ ನಾಯಕರನ್ನು ಕೊಲ್ಲಬೇಕೆಂದು ಬಯಸಿದ್ದಾನೆ ಅಂತಾ ಮೂಲಗಳು ತಿಳಿಸಿವೆ.
ಮಾಹಿತಿ ಪ್ರಕಾರ, ದಲ್ಲಾ ಈ ಹಿಂದೆ ಜೂನ್‌ನಲ್ಲಿ ಕೆನಡಾದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದ. ಪಂಜಾಬ್, ಉತ್ತರ ಪ್ರದೇಶ, ಎನ್‌ಸಿಆರ್ ಮತ್ತು ರಾಜಸ್ಥಾನದ ಪೊಲೀಸರು ಮತ್ತು ಇತರೆ ಭದ್ರತಾ ಏಜೆನ್ಸಿಗಳಿಗೆ ಶಂಕಿತರು ಮತ್ತು ಸ್ಥಳೀಯ ಗ್ಯಾಂಗ್ ಮುಖಂಡರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡುವಂತೆ ಎನ್‌ಐಎ ಸೂಚಿಸಿದೆ.
ಅರ್ಶ್‌ದೀಪ್ ದಲ್ಲಾ ಯಾರು?: 27 ವರ್ಷದ ಅರ್ಶ್‌ದೀಪ್ ದಲ್ಲಾ ಪಂಜಾಬ್‌ನ ಮೋಗಾ ಜಿಲ್ಲೆಯ ನಿವಾಸಿ. ಈತನ ವಿರುದ್ಧ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಾದಕ ದ್ರವ್ಯ ವಿರೋಧಿ ಕಾನೂನಿನಡಿಯಲ್ಲಿ ಕನಿಷ್ಠ 25 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಭಯೋತ್ಪಾದಕ ಸಂಘಟನೆಗಳಲ್ಲಿ ನೇಮಕಗೊಂಡ ಬಳಿಕ ಶಾರ್ಪ್ ಶೂಟರ್‌ಗಳನ್ನು ತರಬೇತಿಗಾಗಿ ವಿದೇಶಗಳಿಗೆ, ವಿಶೇಷವಾಗಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ನಿಜ್ಜರ್ ಹತ್ಯೆ: ಕೆನಡಾ ತನಿಖೆ ಮುಂದುವರೆಯಲಿ, ಅಪರಾಧಿಗಳನ್ನು ನ್ಯಾಯಾಂಗ ವ್ಯಾಪ್ತಿಗೆ ತನ್ನಿ- ಅಮೆರಿಕ
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಹ್ಯಾಂಡ್ಲರ್ ಸುಹೇಲ್ ಜೊತೆ ದಲ್ಲಾ ಈಗಾಗಲೇ ಬಲವಾದ ನಂಟು ಬೆಳೆಸಿಕೊಂಡಿದ್ದು, ಭಾರತಾದ್ಯಂತ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಲು ಯೋಜನೆ ಸಿದ್ಧಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಭಾರತ ವಿರೋಧಿ ಸಂಘಟನೆಗಳು ವಿವಿಧ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜಿಸುತ್ತಿವೆ ಎಂಬ ವರದಿ ಹೊರ ಬಿದ್ದ ನಂತರ ಭಾರತದ ಪ್ರಧಾನ ಭಯೋತ್ಪಾದನಾ ನಿಗ್ರಹ ಸಂಸ್ಥೆ ದೇಶಾದ್ಯಂತ ಖಲಿಸ್ತಾನಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವುದು ಗಮನಾರ್ಹ.
ಇದನ್ನೂ ಓದಿ : ದೆಹಲಿಯಲ್ಲಿ ಖಲಿಸ್ತಾನ್ ಪರ ಬರಹಗಳು ಪತ್ತೆ... ಪಂಜಾಬ್ನಲ್ಲಿ ರೈತರ ರೈಲ್ ರೋಕೋ ಚಳವಳಿಯಲ್ಲಿ ಖಲಿಸ್ತಾನಿ ಬೆಂಬಲಿಗರು ಭಾಗಿ ಶಂಕೆ