ತಿರುವನಂತಪುರ (ಕೇರಳ): ಕೇರಳದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಕುರಿತಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಕೊಲ್ಲಂ, ಅಲಪ್ಪುಳ ಮತ್ತು ಕಾಸರಗೋಡು ಹೊರತುಪಡಿಸಿ 11 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಲ್ಲಂ, ಆಲಪ್ಪುಳ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಾಳೆ ಕಣ್ಣೂರು ಮತ್ತು ಕಾಸರಗೋಡು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಶುಕ್ರವಾರದವರೆಗೆ (22.10.21) ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇಡುಕ್ಕಿ ಸೇರಿದಂತೆ ವಿವಿಧ ಅಣೆಕಟ್ಟುಗಳನ್ನು ತೆರೆಯಲಾಗಿದ್ದು ನದಿಪಾತ್ರದ ಜನರಿಗೆ ಎಚ್ಚರ ವಹಿಸಲು ಸೂಚಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ರಾಜ್ಯದಲ್ಲಿ 12 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕಂದಾಯ ಸಚಿವ ಕೆ.ರಾಜನ್ ಹೇಳಿದ್ದಾರೆ. ವಾಯುಪಡೆ ಮತ್ತು ನೌಕಾಪಡೆಯ ನೆರವು ಸಹ ಕೇಳಲಾಗಿದ್ದು, ತುರ್ತು ಬಳಕೆಗೆ ಲಭ್ಯವಾಗಲಿದೆ.
ರಾಜ್ಯದಲ್ಲಿ ಮಳೆಯಾರ್ಭಟಕ್ಕೆ 39 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ವಿವಿಧೆಡೆ ಐವರು ನಾಪತ್ತೆಯಾಗಿದ್ದಾರೆ. ಪ್ರವಾಹಪೀಡಿತ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಭಾರೀ ಮಳೆಯಾಗುವ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ: ಶತಮಾನದ ಬಳಿಕ ದಾಖಲೆ ಮಹಾಮಳೆಗೆ ನಲುಗಿತು ದೇವಭೂಮಿ ಉತ್ತರಾಖಂಡ