ಎರ್ನಾಕುಲಂ (ಕೇರಳ): ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರನ್ನು (ಮೇಲ್ಶಾಂತಿ) ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡುವುದನ್ನು ರದ್ದುಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಇತ್ತೀಚಿಗೆ ಮುಖ್ಯ ಅರ್ಚಕರಾಗಿ ಆಯ್ಕೆಯಾದ ಪಿಎನ್ ಮಹೇಶ್ ಅವರಿಗೆ ವಿಶೇಷ ಪ್ರತಿನಿಧಿಯ ಮೂಲಕ ನೋಟಿಸ್ ಸಹ ಜಾರಿ ಮಾಡಲಾಗಿದೆ.
ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆ ವಿಧಾನವನ್ನು ಪ್ರಶ್ನಿಸಿ ತಿರುವನಂತಪುರಂ ನಿವಾಸಿ ಮಧುಸೂದನ್ ನಂಬೂತಿರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮೇಲ್ಶಾಂತಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ನ್ಯಾಯಮೂರ್ತಿಗಳಾದ ಅನಿಲ್ ಕೆ.ನರೇಂದ್ರನ್ ಮತ್ತು ಜಿ.ಗಿರೀಶ್ ಅವರನ್ನೊಳಗೊಂಡ ನ್ಯಾಯ ಪೀಠವು ಗುರುವಾರ ಡ್ರಾ ಪ್ರಕ್ರಿಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತ್ತು.
ಇಂದು ಅರ್ಜಿಯ ವಿಚಾರಣೆ ವೇಳೆ, ಎರಡು ಪೇಪರ್‌ಗಳನ್ನು ಡ್ರಾದಲ್ಲಿ ಬಿಡಿಸಿರುವುದು ಉದ್ದೇಶಪೂರ್ವಕವಾಗಿಲ್ಲದಿರಬಹುದು. ಆದರೆ, ಇದೇ ಸತ್ಯ ಎಂದು ನ್ಯಾಯಪೀಠ ಮೌಖಿಕವಾಗಿ ಉಲ್ಲೇಖಿಸಿತು. ಜೊತೆಗೆ ಮುಖ್ಯ ಅರ್ಚಕರಾಗಿ ಆಯ್ಕೆಯಾದ ಪಿ.ಎನ್.ಮಹೇಶ್ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ, ಪಿ.ಎನ್.ಮಹೇಶ್ ವಿರುದ್ಧ ಯಾವುದೇ ವೈಯಕ್ತಿಕ ಆರೋಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ನವೆಂಬರ್ 7ಕ್ಕೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿವೆ.
ಡ್ರಾದಲ್ಲಿ ಅವ್ಯವಹಾರ ಆರೋಪ: ಮುಖ್ಯ ಅರ್ಚಕರನ್ನು ಡ್ರಾ ಮೂಲಕ ಆಯ್ಕೆ ಮಾಡುವುದನ್ನು ರದ್ದು ಮಾಡಬೇಕೆಂದು ಮಧುಸೂದನ್ ನಂಬೂತಿರಿ ತಮ್ಮ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಡ್ರಾದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಮುಖ್ಯ ಅರ್ಚಕರಾಗಿ ಆಯ್ಕೆಯಾದವರ ಹೆಸರಲ್ಲಿ ಬರೆದ ಕಾಗದವನ್ನು ಮಾತ್ರ ಮಡಚಿ, ಇತರರ ಹೆಸರಲ್ಲಿ ಬರೆದಿದ್ದ ಕಾಗದವನ್ನು ಸುತ್ತಿ ಮಡಕೆಯಲ್ಲಿಟ್ಟಿದ್ದಾರೆ. ಇದರಿಂದ ಮಡಕೆಯನ್ನು ಅಲುಗಾಡಿಸಿದಾಗ ಮಡಿಸಿದ ಕಾಗದವು ಸಹಜವಾಗಿ ಮೇಲಕ್ಕೆ ಏರುತ್ತದೆ. ಆದ್ದರಿಂದ ಅದೇ ಕಾಗದವನ್ನು ಆಯ್ಕೆ ಮಾಡಿ ಡ್ರಾ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ, ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆ ರದ್ದುಪಡಿಸಬೇಕು ಹಾಗೂ ಹೊಸಬರನ್ನು ಆಯ್ಕೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದರ ಆಧಾರದ ಮೇಲೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಈ ಡ್ರಾ ಪ್ರಕ್ರಿಯೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ಜೊತೆಗೆ ಡ್ರಾ ಸಂದರ್ಭದಲ್ಲಿ ನ್ಯೂಸ್ ಚಾನೆಲ್‌ನ ದೃಶ್ಯಾವಳಿಗಳನ್ನೂ ನ್ಯಾಯಾಲಯ ಪರಿಶೀಲಿಸಿ, ನೋಟಿಸ್ ಜಾರಿ ಮಾಡಿದೆ. ಅಕ್ಟೋಬರ್ 18ರಂದು ದೇವಾಲಯದ ಆವರಣವಾದ ಶಬರಿಮಲೆ ಸನ್ನಿಧಾನಂನಲ್ಲಿ ಚೀಟಿ ಎತ್ತುವ ಮೂಲಕ ಪ್ರಧಾನ ಅರ್ಚಕರ ಆಯ್ಕೆ ಮಾಡಲಾಗಿತ್ತು. ಒಟ್ಟು 17 ಅರ್ಚಕರ ಹೆಸರು ಆಯ್ಕೆ ಪಟ್ಟಿಯಲ್ಲಿತ್ತು.
ಇದನ್ನೂ ಓದಿ: ಲಕ್ಕಿ ಡ್ರಾ ಮೂಲಕ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ನೂತನ ಪ್ರಧಾನ ಅರ್ಚಕರ ಆಯ್ಕೆ