ತಿರುವನಂತಪುರಂ (ಕೇರಳ): ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಯುದ್ಧ ನಡೆಸುತ್ತಿರುವ ನಡುವೆ ಕೇರಳದ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿಥಾನ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು 'ಯಾವುದೇ ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲಬೇಕು' ಎಂದಿದ್ದಾರೆ.
ಪ್ಯಾಲೆಸ್ಟೈನಿಯನ್ನರಿಗೆ ಬೆಂಬಲ ಸೂಚಿಸಿ ಕಾಸರಗೋಡಿನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಸಂಸದ, ಇಸ್ರೇಲ್ ಪ್ರಧಾನಿಯನ್ನು 'ನ್ಯೂರೆಂಬರ್ಗ್ ಮಾದರಿ' (ನಾಜಿಗಳನ್ನು ಹತ್ಯೆ ಮಾಡಲು ಬಳಸಿದ ತಂತ್ರ) ಹತ್ಯೆ ಮಾಡಬೇಕು. ಜಿನೇವಾ ಒಪ್ಪಂದಗಳನ್ನು ಮುರಿಯುವವರಿಗೆ ಏನು ಮಾಡಬೇಕು ನೀವೇ ಹೇಳಿ. ಪ್ಯಾಲೆಸ್ಟೈನಿಯನ್ನರಿಗೆ ನ್ಯಾಯ ಸಿಗಬೇಕಾದರೆ, ನ್ಯೂರೆಂಬರ್ಗ್ ಪ್ರಯೋಗ ಮಾಡಬೇಕು. ಅದನ್ನು ಬಳಸುವ ಕಾಲ ಬಂದಿದೆ. ಬೆಂಜಮಿನ್ ನೆತನ್ಯಾಹು ಯುದ್ಧ ಅಪರಾಧಿಯಾಗಿದ್ದಾರೆ. ಪ್ಯಾಲೆಸ್ಟೈನಿಯನ್ನರ ಮೇಲೆ ಮಾಡುತ್ತಿರುವ ದೌರ್ಜನ್ಯದ ಕಾರಣ ನೆತನ್ಯಾಹು ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದರು.
ನಾಗರಿಕರ ಸಾವಿನ ಬಗ್ಗೆ ಪ್ರಧಾನಿ ಮೋದಿ ಕಳವಳ: ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದಲ್ಲಿ ನಾಗರಿಕರು ಸಾವನ್ನಪ್ಪುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ಹಮಾಸ್ ಭಯೋತ್ಪಾದಕ ದಾಳಿಯನ್ನೂ ಖಂಡಿಸಿದರು. ಭಾರತವು ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವನ್ನು ಕಳುಹಿಸಿದೆ ಎಂದು ಹೇಳಿದರು.
ಶುಕ್ರವಾರ ನಡೆದ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿನ ಅವರ ಭಾಷಣದಲ್ಲಿ ಇಸ್ರೇಲ್ನ ಯುದ್ಧವನ್ನು ಪ್ರಸ್ತಾಪಿಸಿದರು. ಯಾವುದೇ ದೇಶಗಳು ಸಂಯಮ, ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಬೇಕು. ಭಾರತವು ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆಲೆಯಲ್ಲಿ ಸಹಾಯಹಸ್ತ ಚಾಚಿದೆ ಎಂದರು.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ ಬಳಿಕ, ಇಸ್ರೇಲ್ ಪ್ರತಿ ದಾಳಿ ನಡೆಸುತ್ತಿದ್ದು, ಇದರಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಗಾಜಾಪಟ್ಟಿಯು ಧ್ವಂಸವಾಗಿದೆ. 2,500 ಭಯೋತ್ಪಾದಕರು ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ ಗಡಿಯನ್ನು ದಾಟಿ ದಾಳಿ ನಡೆಸಿದ್ದರು. ಇದರಲ್ಲಿ 1400 ಅಧಿಕ ಇಸ್ರೇಲಿಯನ್ನರು ಸಾವಿಗೀಡಾಗಿದ್ದರು. 240 ಕ್ಕೂ ಅಧಿಕ ಜನರು ಒತ್ತೆಯಾಳಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಇದೇ ವೇಳೆ ಹಮಾಸ್ ಉಗ್ರರು ಆಸ್ಪತ್ರೆಗಳಲ್ಲಿ ಅವಿತುಕೊಂಡಿದ್ದಾರೆ ಎಂದು ಹೇಳಿ, ಗಾಜಾಕ್ಕೆ ಮಾನವೀಯ ಆಧಾರದ ಮೇಲೆ ತೆರಳುತ್ತಿದ್ದ ಸೌಲಭ್ಯಗಳ ವಿತರಣೆಯನ್ನು ಸಂಪೂರ್ಣವಾಗಿ ಇಸ್ರೇಲ್ ತಡೆದಿದೆ.
ಏನಿದು ನ್ಯೂರೆಂಬರ್ಗ್ ಮಾದರಿ: ಎರಡನೆಯ ಮಹಾಯುದ್ಧದ ಬಳಿಕ ಯುದ್ಧ ಅಪರಾಧಗಳಾದ ನಾಜಿಗಳನ್ನು ವಿಚಾರಣೆಗೆಂದು ನ್ಯೂರೆಂಬರ್ಗ್ ಎಂಬಲ್ಲಿಗೆ ಕರೆ ತಂದು ಅಲ್ಲಿ, ಯಾವುದೇ ವಿಚಾರಣೆಯಿಲ್ಲದೇ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿತ್ತು. ಇದರಲ್ಲಿ ಸಾವಿರಾರು ನಾಜಿಗಳು ಸಾವಿಗೀಡಾಗಿದ್ದರು. ಯಾವುದೇ ವಿಚಾರಣೆಯಿಲ್ಲದೇ ಕ್ರೂರವಾಗಿ ಹತ್ಯೆ ಮಾಡುವುದನ್ನು ನ್ಯೂರೆಂಬರ್ಗ್ ಮಾದರಿ ಎಂದು ಕರೆಯಲಾಗುತ್ತದೆ.( ಎಎನ್ಐ)
ಇದನ್ನೂ ಓದಿ: ಇಸ್ರೇಲ್ನ ಪ್ರಮುಖ ನಗರ ಟೆಲ್ ಅವೀವ್ ಮೇಲೂ ದಾಳಿಗೆ ಸಂಚು: ಹಮಾಸ್ ಉಗ್ರ ದಾಳಿಯ ರಹಸ್ಯ ಬಯಲು