ತಿರುವನಂತಪುರಂ(ಕೇರಳ): ರಾಜ್ಯಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಕೇರಳ ಸರ್ಕಾರ ತನ್ನ ಮಾರ್ಗಸೂಚಿಗಳನ್ನು ನವೀಕರಿಸಿದೆ. ಈ ನೂತನ ಕ್ರಮವು ಕೇಂದ್ರ ಆರೋಗ್ಯ ಸಚಿವಾಲಯದ ಶಿಫಾರಸನ್ನು ಆಧರಿಸಿದೆ.
ಹೊಸ ಮಾರ್ಗಸೂಚಿ ಅಡಿಯಲ್ಲಿ ಯುಕೆಯಿಂದ ಆಗಮಿಸುವ ಪ್ರಯಾಣಿಕರು 10 ದಿನಗಳ ಹೋಮ್ ಕ್ವಾರಂಟೈನ್‌ಗೆ ಒಳಗಾಗಬೇಕು. ಹಾಗೆ ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮತ್ತು ಯುರೋಪ್ ನಿಂದ ಬರುವವರು 7 ದಿನಗಳ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ.
ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯದ ವಿಮಾನ ನಿಲ್ದಾಣಗಳನ್ನು ತಲುಪಿದ ನಂತರ RT-PCR ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಪರೀಕ್ಷೆ ನಡೆಸಿದ ನಂತರ ಏನಾದರೂ ರೋಗ ಲಕ್ಷಣ ಕಂಡುಬಂದರೆ 14 ದಿನಗಳ ಕ್ವಾರಂಟೈನ್ ಕಡ್ಡಾಯ.
ಕೋವಿಡ್ ಪರೀಕ್ಷೆಯ ಹೊರತಾಗಿ, ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಯುರೋಪ್, ಮಧ್ಯಪ್ರಾಚ್ಯ, ಬಾಂಗ್ಲಾದೇಶ, ಬೋಟ್ಸ್ವಾನ, ಚೀನಾ, ಮಾರಿಷಸ್, ನ್ಯೂಜಿಲ್ಯಾಂಡ್ ಮತ್ತು ಜಿಂಬಾಬ್ವೆ ದೇಶಗಳ ಪ್ರಯಾಣಿಕರ ಮಾದರಿಗಳನ್ನು ವೈರಸ್ ರೂಪಾಂತರದ ಉಪಸ್ಥಿತಿಯನ್ನು ಪರೀಕ್ಷಿಸಲು ಮಾದರಿ ರವಾನಿಸಲಾಗುತ್ತದೆ.