ನವದೆಹಲಿ: ಪ್ರಧಾನಿ ಮೋದಿ ಇಂದು ಬೆಳಗ್ಗೆ 8 ಗಂಟೆಗೆ ಕೇದಾರನಾಥಕ್ಕೆ ಭೇಟಿ ನೀಡಲಿದ್ದಾರೆ. 8.35ರ ಸುಮಾರಿಗೆ ಕೇದಾರನಾಥನ ದರ್ಶನ ಪಡೆಯಲಿದ್ದಾರೆ. ಬಳಿಕ 9.40ರ ಸುಮಾರಿಗೆ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಕಾರ್ಯಾಲಯದ ಸೂಚನೆ ಮೇರೆಗೆ ಮೈಸೂರಿನ ಖ್ಯಾತ ಶಿಲ್ಪಿ ಈ ಪ್ರತಿಮೆ ನಿರ್ಮಿಸಿದ್ದಾರೆ.
ಕೇದಾರನಾಥದಲ್ಲಿಯೇ ಶಂಕರಾಚಾರ್ಯರು ದೇಹತ್ಯಾಗ ಮಾಡಿದರು ಎಂಬ ನಂಬಿಕೆ ಇದೆ. ಹೀಗಾಗಿ ಪಿಎಂ ಮೋದಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಭಕ್ತರ ದರ್ಶನಕ್ಕೆ ಅನಾವರಣಗೊಳಿಸುವರು. ಈ ವೇಳೆ ಕೇಂದ್ರ ಸಚಿವರು, ಸಂಸದರು ಮತ್ತು ಬಿಜೆಪಿಯ ಹಿರಿಯ ನಾಯಕರು ದೇಶದ 100ಕ್ಕೂ ಹೆಚ್ಚು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.
ಬಿಜೆಪಿ ಮೂಲಗಳು ಹೇಳುವ ಪ್ರಕಾರ, ಕೇಂದ್ರ ಸಚಿವರು ಮತ್ತು ಹಿರಿಯ ಬಿಜೆಪಿ ಸಂಸದರು ಮತ್ತು ಪಕ್ಷದ ಮುಖಂಡರು ಪ್ರಮುಖ ಸ್ಥಳಗಳಿಗೆ ಪ್ರಯಾಣಿಸಲಿದ್ದಾರೆ. ಇಂದು ಬೆಳಗ್ಗೆ ಕೇದಾರನಾಥದಲ್ಲಿ ಪ್ರಧಾನ ಮಂತ್ರಿ ಮೋದಿ ಎರಡು ಗಂಟೆಗಳ ಕಾಲ ಉಪಸ್ಥಿತರಿರುತ್ತಾರೆ. ಈ ಹೆಚ್ಚಿನ ನಾಯಕರು ತಮ್ಮ ತವರು ರಾಜ್ಯಗಳಲ್ಲಿರುವ ಪವಿತ್ರ ಸ್ಥಳಗಳಿಗೆ ಪ್ರಯಾಣಿಸುತ್ತಾರೆ.
ಕೇದಾರನಾಥದಿಂದ ಪ್ರಧಾನಮಂತ್ರಿ ಕಾರ್ಯಕ್ರಮದ ನೇರಪ್ರಸಾರಕ್ಕಾಗಿ ಈ ಎಲ್ಲಾ ಸ್ಥಳಗಳಲ್ಲಿ ಎಲ್‌ಇಡಿಗಳು ಮತ್ತು ದೊಡ್ಡ ಪರದೆಗಳನ್ನು ಹಾಕಲಾಗುತ್ತಿದೆ. ಪ್ರಧಾನಮಂತ್ರಿ ಮೋದಿ, ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪುನರ್ ನಿರ್ಮಾಣಗೊಂಡಿರುವ ಸಮಾಧಿ (2013ರ ಪ್ರವಾಹದ ನಂತರ) ಮತ್ತು ಅವರ ಪ್ರತಿಮೆ ಸೇರಿದಂತೆ ಹಲವಾರು ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. ಕೇದಾರನಾಥದಲ್ಲಿ ಪ್ರತಿಷ್ಠಾಪನೆ ಮಾಡಿರುವ ಆದಿ ಗುರು ಶಂಕರಾಚಾರ್ಯರ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಕೆತ್ತಿದ್ದಾರೆ. ಕೇದಾರನಾಥ ಭೇಟಿ ವೇಳೆ ಪ್ರಧಾನಿ ಮೋದಿ ಭಾಷಣವನ್ನೂ ಮಾಡಲಿದ್ದಾರೆ.