ಹಜಾರಿಬಾಗ್(ಜಾರ್ಖಂಡ್): ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಒಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮೇಲೆ ಶಸ್ತ್ರಧಾರಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪ್ರಕಾಶ್ ಅವರನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕಾಶ್ ಅವರು ಶುಕ್ರವಾರ ಸಂಜೆ ಕೊರ್ರಾ ಪ್ರದೇಶದ ಕ್ಯಾನರಿ ಹಿಲ್ ರಸ್ತೆ ಸಮೀಪದಲ್ಲಿ ತಾವು ಖರೀದಿಸಿದ ಭೂಮಿಯಲ್ಲಿ ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಡಿಎಸ್ಪಿ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
ಭೂ ಮಾಫಿಯಾ ಅಶೋಕ್ ಸಾವೊ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡ ಪ್ರಕಾಶ್ ಅವರೊಂದಿಗೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ದಾಳಿಕೋರರು ವಾಗ್ವಾದ ನಡೆಸಿದರು. ನಂತರ ಪ್ರಕಾಶ್ ಮೇಲೆ ಅವರು ಏಕಾಎಕಿ ಗುಂಡು ಹಾರಿಸಿದರು ಎಂದು ಡಿಎಸ್ಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರು ಭೂ ಮಾಫಿಯಾ ಅಶೋಕ್ ಸಾವೊನನ್ನು ಬಂಧಿಸಿದ್ದು, ಆದರೆ ಆತನ ಐವರು ಸಹಚರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಹಜಾರಿಬಾಗ್ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ:ಹಾವೇರಿ: ಅಣ್ಣನ ಹೆಂಡತಿ, ಮಕ್ಕಳನ್ನು ನಿರ್ದಯವಾಗಿ ಕೊಚ್ಚಿ ಕೊಂದ ಪಾಪಿ