ಝಾನ್ಸಿ: ಹೃದಯರೋಗದಿಂದ ಬಳಲುತ್ತಿದ್ದ ಬಾಲಕಿಯ ನೆರವಿಗೆ ಸೋನು ಸೂದ್ ಆಗಮಿಸಿದ್ದರಿಂದ ಆಕೆಯ ಪ್ರಾಣ ಉಳಿದಿದೆ.
ಉತ್ತರಪ್ರದೇಶದ ಝಾನ್ಸಿಯ ಶಿವಾಜಿ ನಗರದ ನಿವಾಸಿ 9 ವರ್ಷದ ಬಾಲಕಿ ಲಕ್ಕಿ ಹೃದಯ ರೋಗದಿಂದ ಬಳಲುತ್ತಿದ್ದಳು. ಲಕ್ಕಿಯ ತಂದೆ ಧರ್ಮೇಂದ್ರ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗಳ ಚಿಕಿತ್ಸೆ ಹಣ ಭರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಧರ್ಮೇಂದ್ರ ತಮ್ಮ ನೋವನ್ನು ಕೆಲ ಸಾಮಾಜಿಕ ಸಂಘಟನೆಗಳ ಮುಂದೆ ತೋಡಿಕೊಂಡಿದ್ದರು.
ಸಾಮಾಜಿಕ ಸಂಘಟನೆಯೊಂದು ಲಕ್ಕಿ ಕಾಯಿಲೆಗೆ ಚಿಕಿತ್ಸೆ ನೀಡಲು ಸಹಾಯಕ್ಕಾಗಿ ಮುಂದೆ ಬರುವಂತೆ ನಟ ಸೋನು ಸೂದ್ ಸೇರಿದಂತೆ ಜನರಿಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಈ ಪೋಸ್ಟ್ ನೋಡಿದ ಸೋನು ಸೂದ್ ಅವರ ಸಹಾಯಕ್ಕೆ ಕೂಡಲೇ ಮುಂದಾದರು. ಸೋನು ಸೂದ್ ಅವರ ವ್ಯವಸ್ಥಾಪಕರು ಈ ಕುಟುಂಬವನ್ನು ಸಂಪರ್ಕಿಸಿ ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ಚಿಕಿತ್ಸೆ ನೀಡಿ ಅದರ ಖರ್ಚ್ನ್ನು ಭರಿಸಿದರು.
ಶಸ್ತ್ರಚಿಕಿತ್ಸೆಯ ನಂತರ ಬಾಲಕಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಲಕ್ಕಿ ಕುಟುಂಬ ಮುಂಬೈನಿಂದ ಝಾನ್ಸಿಗೆ ತೆರಳಿದೆ. ಝಾನ್ಸಿಯ ಸಾಮಾಜಿಕ ಸಂಸ್ಥೆಗಳು ಬಾಲಕಿಯ ಸಹಾಯಕ್ಕಾಗಿ ಮುಂದೆ ಬಂದ ಸೋನು ಸೂದ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸೋನು ಸೂದ್ ಟ್ವೀಟ್ ಮಾಡಿ ಸಿಹಿತಿಂಡಿಗಳನ್ನು ತಿನ್ನುವ ಬಗ್ಗೆ ಬರೆದಿದ್ದಾರೆ.