ಜೈಪುರ (ರಾಜಸ್ಥಾನ): ರಾಜಸ್ಥಾನದಲ್ಲಿ ಇಂದು ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೈಪುರ ಕಮಿಷನರೇಟ್‌ನ ವಿಶೇಷ ತಂಡವು 82 ಕ್ವಿಂಟಾಲ್ಗೂ ಅಧಿಕ ಅಮೋನಿಯಂ ನೈಟ್ರೇಟ್ ಮತ್ತು 2,095 ಜಿಲೆಟಿನ್ ಕಡ್ಡಿಗಳನ್ನು ಜಪ್ತಿ ಮಾಡಿದೆ.
ಇಲ್ಲಿನ ಮೋಹನ್‌ಬರಿಯಲ್ಲಿರುವ ಗೌರಾ ಸಮೀಪ ಧನಿ ಗ್ರಾಮದ ಮೇಲೆ ಕಾರ್ಯಾಚರಣೆಯಲ್ಲಿ ಈ ಅಪಾರ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ಅಲ್ಲದೇ, 3,250 ಮೀಟರ್ ಫ್ಯೂಸ್ ವೈರ್ ಮತ್ತು 1,600 ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಜೊತೆಗೆ ಕಾಲುರಾಮ್ ಮತ್ತು ಗೋಪಾಲ್ ಲಾಲ್ ಎಂಬ ಇಬ್ಬರು ಸಹೋದರರನ್ನೂ ಬಂಧಿಸಲಾಗಿದೆ ಎಂದು ಕ್ರೈಂ ವಿಭಾಗದ ಹೆಚ್ಚುವರಿ ಡಿಸಿಪಿ ಸುಲೇಶ್ ಚೌಧರಿ ತಿಳಿಸಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳು ಕಳೆದ ಎರಡು ವರ್ಷಗಳಿಂದ ಅಕ್ರಮ ಸ್ಫೋಟಕಗಳ ದಂಧೆಯಲ್ಲಿ ತೊಡಗಿದ್ದರು. ಸ್ಫೋಟಕಗಳನ್ನು ನೀಮ್ಕಥಾನ ನಿವಾಸಿ ಜಗದೀಶ್ ಸಿಂಗ್ ಎಂಬ ವ್ಯಕ್ತಿ ಕಳುಹಿಸಿದ್ದಾಗಿ ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ಆರೋಪಿಗಳು ಜೈಪುರ ಗ್ರಾಮಾಂತರ ಮತ್ತು ಜೈಪುರ ನಗರದ ಸುತ್ತಮುತ್ತಲಿನ ಕಲ್ಲು ಗಣಿಗಳಿಗೆ ಅಕ್ರಮವಾಗಿ ಸ್ಫೋಟಕಗಳನ್ನು ಪೂರೈಸುವ ಜಾಲವನ್ನು ನಿರ್ವಹಿಸುತ್ತಿದ್ದರು ಎಂದು ವಿವರಿಸಿದ್ದಾರೆ.
50 ಕೆಜಿ ತೂಕದ ಅಮೋನಿಯಂ ನೈಟ್ರೇಟ್ ಚೀಲವನ್ನು 7,300 ರೂ.ಗೆ ಖರೀದಿಸಿ, ಜೈಪುರದಲ್ಲಿ 14ರಿಂದ 15 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ತಮ್ಮ ಮನೆಯಲ್ಲಿ 148 ಬ್ಯಾಗ್‌ಗಳ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು, ಇದುವರೆಗೆ ಯಾರಿಗೆಲ್ಲ ಅಕ್ರಮ ಸ್ಫೋಟಕಗಳನ್ನು ಮಾರಾಟ ಮಾಡಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗುರುದಾಸ್‌ಪುರದಲ್ಲಿ ಪಾಕಿಸ್ತಾನದ ಡ್ರೋನ್ ಪತ್ತೆ.. ಬಿಎಸ್‌ಎಫ್ ಗುಂಡಿನ ದಾಳಿ