ನವದೆಹಲಿ: ಕೇಂದ್ರದ ಸುಮಾರು 15 ವಿಪಕ್ಷಗಳು ಸಭೆ ಸೇರಿದ್ದು, ಈ ದಿನ ಐತಿಹಾಸಿಕವಾಗಿದೆ ಮತ್ತು 2024ಕ್ಕೆ ಟ್ರೈಲರ್ ಆಗಿದೆ ಎಂದು ಕಾಂಗ್ರೆಸ್ ಪಕ್ಷ ಕರೆದುಕೊಂಡಿದೆ. ಈ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಡುವ ಬಗ್ಗೆ ಸುಳಿವು ಸಿಕ್ಕಿದೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಮತ್ತು ಪಕ್ಷದ ಹಿರಿಯ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಇಂದು ಸುಮಾರು ಉಪಾಹಾರದ ವೇಳೆ 15 ಪಕ್ಷಗಳು ಸಭೆ ಸೇರಿದ್ದು, ಈ ಪಕ್ಷಗಳು ದೇಶದ ಸುಮಾರು ಶೇಕಡಾ 60ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ ಎಂದಿದ್ದಾರೆ.
ಇದರ ಜೊತೆಗೆ ಸಭೆಯಲ್ಲಿ ಅತ್ಯಂತ ಸೌಹಾರ್ದಯುತ, ಆತ್ಮೀಯ, ಮುಕ್ತವಾಗಿ ಹಾಗೂ ಪ್ರಾಮಾಣಿಕವಾಗಿ ಚರ್ಚೆ ನಡೆಸಲಾಗಿದ್ದು, ಅಲ್ಲಿ ಭಾಗವಹಿದವರೆಲ್ಲರಲ್ಲೂ ಒಂದೇ ಒಂದು ಪದವಿತ್ತು. ಅದು ಏಕತೆಯಾಗಿತ್ತು ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಪಕ್ಷಗಳ ಸಂಸದರಿಗೆ ಉಪಾಹಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 15 ಪಕ್ಷಗಳಿಂದ ನೂರಕ್ಕೂ ಹೆಚ್ಚು ಸಂಸದರು ಭಾಗಿಯಾಗಿದ್ದರು.
ಪೆಗಾಸಸ್, ಇಂಧನ ಬೆಲೆ ಏರಿಕೆ, ರೈತರ ಸಮಸ್ಯೆ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಯುತ್ತದೆ. ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲ ಪಕ್ಷಗಳು ಏಕತೆ ತೋರಲು ಸ್ಪಷ್ಟ ನಿಲುವನ್ನು ತೆಗೆದುಕೊಂಡಿವೆ. ಇತರ ಪಕ್ಷಗಳೂ ಬೆಂಬಲ ನೀಡಬೇಕೆಂದು ನಾನು ಬಯಸುತ್ತೇನೆ. ಕೇಂದ್ರ ಸರ್ಕಾರದ ವಿರುದ್ಧ ಎಲ್ಲರೂ ಧ್ವನಿಗೂಡಿಸಬೇಕು ಎಂದು ಅಭಿಷೇಕ್ ಮನು ಸಿಂಘ್ವಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರೀತ್ಸೆ ಅಂತಾ ಕಾಡಿದ್ದ ಪಾತಕಿ, ಆಕೆ ಒಪ್ಪದಿದ್ದಾಗ ಕೊನೆಗೆ ಪ್ರಾಣವನ್ನೇ ತೆಗೆದ..