ನವದೆಹಲಿ: ರೈಲುಗಳಲ್ಲಿ ಪ್ರಯಾಣಿಸುವಾಗ ಕೆಲವೊಮ್ಮೆ ಆಹಾರ, ಉಪಹಾರದ ವಿಷಯವಾಗಿ ಪ್ರಯಾಣಿಕರಿಗೆ ಬೇಸರ, ಸಮಸ್ಯೆ ಆಗುವುದು ಸಾಮಾನ್ಯ. ಆದರೆ, ಇದೀಗ ರೈಲ್ವೆ ಪ್ರಯಾಣಿಕರಿಗೆ ಖುಷಿ ಸುದ್ದಿ ಹೊರಬಿದ್ದಿದೆ. ವ್ಯಾಟ್ಸಪ್ನಲ್ಲಿ ಸಂದೇಶ ಕಳುಹಿಸುವ ಮೂಲಕ ನೀವು ಕುಳಿತುಕೊಂಡಿರುವ ಆಸನಕ್ಕೆ ನಿಮ್ಮಿಷ್ಟದ ಆಹಾರ ತರಿಸಿಕೊಳ್ಳಬಹುದು.
ರೈಲ್ವೆ ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ IRCTC ಇದೀಗ ಆಹಾರ ವಿತರಣಾ ಸೇವೆ Zoop ವಾಟ್ಸಪ್ ಚಾಟ್ ಬಳಸಿಕೊಂಡು ಆಹಾರ ಆರ್ಡರ್ ನೀಡಲು ಮುಂದಾಗಿದೆ. ನಾವು ಆನ್ಲೈನ್ ಮೂಲಕ ನಮಗೆ ಇಷ್ಟವಾಗುವ ಆಹಾರ ಆರ್ಡರ್ ಮಾಡಬಹುದಾಗಿದೆ. ಜಿಯೋ Haptik ನೊಂದಿಗೆ ಪಾಲುದಾರಿಕೆ ಹೊಂದಿರುವ ಜೂಪ್ ಪ್ರಯಾಣಿಕರಿಗೆ ಈ ಸೇವೆ ಒದಗಿಸಲು ಮುಂದಾಗಿದೆ. ನಾವು ರೈಲು ಪ್ರಯಾಣದಲ್ಲಿರುವಾಗ PNR ಸಂಖ್ಯೆಯ ಮೂಲಕ ಆಹಾರ ಆರ್ಡರ್ ಮಾಡಬಹುದಾಗಿದೆ.
WhatsApp ಮೂಲಕ ಯಾವುದೇ ರೈಲ್ವೆ ನಿಲ್ದಾಣದಿಂದ ಆಹಾರ ಆರ್ಡರ್ ಮಾಡಬಹುದಾಗಿದ್ದು, Zoop ಆ್ಯಪ್ ಮೂಲಕ ನಮ್ಮ ಊಟದ ಟ್ರ್ಯಾಕಿಂಗ್ ಸಹ ಸಾಧ್ಯವಿದೆ.
WhatsApp ಮೂಲಕ ಫುಡ್ ಆರ್ಡರ್ ಮಾಡುವುದು ಹೇಗೆ?
1. ಮೊಟ್ಟ ಮೊದಲನೇಯದಾಗಿ Zoop ಚಾಟ್‌ಬಾಟ್ ನಂಬರ್ +91 7042062070 ಸಂಖ್ಯೆಯನ್ನು ಮೊಬೈಲ್ನಲ್ಲಿ ಸೇವ್ ಮಾಡಿಕೊಳ್ಳಬೇಕು. ತದನಂತರ WhatsAppಗೆ ಹೋಗಿ ಆ ಸಂಖ್ಯೆಗೆ 'ಹಾಯ್' ಎಂದು ಟೈಪ್ ಮಾಡಿ ಸಂದೇಶ ಕಳುಹಿಸಬೇಕು.
2. ತದನಂತರ Zoop ನಿಂದ ನಮಗೆ ಉತ್ತರ ಬರಲಿದೆ. ಜೊತೆಗೆ ನೀವು ಆಹಾರ, ತಿಂಡಿ ಆರ್ಡರ್ ಮಾಡಲು ಬಯಸುವಿರಾ ಎಂಬ ಪ್ರಶ್ನೆ ಕೇಳಲಾಗುವುದು. ಇದೇ ವೇಳೆ PNR ಸ್ಟೇಟಸ್, ಟ್ರ್ಯಾಕ್ ಆರ್ಡರ್ ಇತ್ಯಾದಿ ಪರಿಶೀಲಿಸಲಾಗುತ್ತದೆ.
3. ಫುಡ್ ಆರ್ಡರ್ ಮಾಡಲು ಬಯಸಿದರೆ ನೀವು ಆರ್ಡರ್ ಎ ಫುಡ್(Order A Food) ಆಯ್ಕೆ ಕ್ಲಿಕ್ ಮಾಡಬೇಕು.
4. ಇದಾದ ಬಳಿಕ ನಿಮ್ಮ 10 ಅಂಕಿಯ ರೈಲ್ವೆ PNR ಸಂಖ್ಯೆ ನೀಡುವುದು ಕಡ್ಡಾಯ.
5. ನೀವು ನೀಡಿದ ಎಲ್ಲ ವಿವರ ಸರಿಯಾಗಿವೆ ಎಂದು ದೃಢಪಡಿಸಿದರೆ, ನಿಮಗೆ ಆಹಾರ ತಲುಪಿಸಲು ಅಥವಾ ಪಡೆದುಕೊಳ್ಳುವ ನಿಲ್ದಾಣ ಆಯ್ಕೆ ಮಾಡಲು ಕೇಳಲಾಗುತ್ತದೆ.
6. ನಿಲ್ದಾಣ ಆಯ್ಕೆ ಮಾಡಿದ ನಂತರ ನೀವು ನಿಮ್ಮ ಆಹಾರವನ್ನು ಆರ್ಡರ್ ಮಾಡಲು ಬಯಸುವ ರೆಸ್ಟೋರೆಂಟ್ ಆಯ್ಕೆ ಮಾಡಬೇಕು.
7. ನಂತರ ನೀವು ತಿನ್ನಲು ಬಯಸುವ ಆಹಾರ, ತಿಂಡಿ ಆಯ್ಕೆ ಮಾಡಬೇಕಾಗುತ್ತದೆ.(ನಿಮ್ಮಿಷ್ಟದ ಆಹಾರ)
8. ಒಮ್ಮೆ ನೀವು ಆರ್ಡರ್ ಮಾಡಿದ ನಂತರ, ನಿಮ್ಮ ಆರ್ಡರ್‌ನ ವಿವರಗಳನ್ನು ನೀವು ಪಡೆಯುತ್ತೀರಿ.
9. ಬಳಿಕ ಆಹಾರದ ಬಿಲ್ ಮೊತ್ತವನ್ನು UPI, ನೆಟ್‌ಬ್ಯಾಂಕಿಂಗ್ ಮುಂತಾದ ಸೇವೆಗಳ ಮೂಲಕ ಪಾವತಿ ಮಾಡಬಹುದಾಗಿದೆ.
10. ನೀವೂ ಗುರುತಿಸಿರುವ ರೈಲ್ವೆ ನಿಲ್ದಾಣದಲ್ಲಿ ನಿಮಗೆ ನೀವು ಇಷ್ಟಪಡುವ ಆಹಾರ ಸಿಗಲಿದೆ.