ಮುಂಬೈ (ಮಹಾರಾಷ್ಟ್ರ): ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಮಹಾರಾಷ್ಟ್ರ ಸರ್ಕಾರವು ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ದಕ್ಷಿಣ ಮುಂಬೈನ ಕೊಲಬಾದಲ್ಲಿರುವ ರತನ್ ಟಾಟಾ ಅವರ ನಿವಾಸಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಅವರು ಭೇಟಿ ನೀಡಿ, ಉದ್ಯೋಗ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಶಾಲು, ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮಹಾರಾಷ್ಟ್ರ ಸರ್ಕಾರವು ಇದೇ ಮೊದಲ ಬಾರಿಗೆ ಉದ್ಯೋಗ ರತ್ನ ಪ್ರಶಸ್ತಿ ಪ್ರದಾನ ಮಾಡಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ರತನ್ ಟಾಟಾ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ. ಎಲ್ಲ ಕ್ಷೇತ್ರಗಳಲ್ಲಿ ಟಾಟಾ ಸಮೂಹದ ಕೊಡುಗೆ ಅಪಾರವಾಗಿದೆ. ಟಾಟಾ ಎಂದರೆ ನಂಬಿಕೆ ಎಂದು ಹೇಳಿದರು. ಟಾಟಾ ಗ್ರೂಪ್ ವಿವಿಧ ಆರು ಖಂಡಗಳ 100ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. 2021-22ರಲ್ಲಿ ಟಾಟಾ ಕಂಪನಿಗಳ ಒಟ್ಟು ಆದಾಯ $128 ಬಿಲಿಯನ್ ಇತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಇಂದು ರತನ್ ಟಾಟಾ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವೇಳೆ ಅವರಿಗೆ ಹೂಗುಚ್ಛ ನೀಡಿ ಶಾಲು ಹೊದಿಸಿ, ವಿಶೇಷವಾಗಿ ರಚಿಸಿದ ರತನ್ ಟಾಟಾ ಅವರ ಭಾವಚಿತ್ರವನ್ನು ನೀಡಿ ಗೌರವಿಸಲಾಯಿತು. ಜೊತೆಗೆ 25 ಲಕ್ಷ ರೂಪಾಯಿ ಚೆಕ್ ನೀಡಲಾಯಿತು.
ರತನ್ ಟಾಟಾ ಅವರು ಟಾಟಾ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಮಾಜಿ ಅಧ್ಯಕ್ಷರಾಗಿದ್ದರು. ಭಾರತದ ಕೈಗಾರಿಕಾ ಕ್ಷೇತ್ರದ ಬೆನ್ನೆಲುಬು ಆಗಿದ್ದಾರೆ. ಮುಂಬೈನಲ್ಲಿರುವ ಟಾಟಾ ನಿವಾಸದಲ್ಲಿ ಸರಳವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷದೀಪ್ ಕಾಂಬಳೆ ಸನ್ಮಾನ ಪತ್ರವನ್ನು ವಾಚಿಸಿದರು ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿ, ಮಹಾರಾಷ್ಟ್ರ ಸರ್ಕಾರವು ಟಾಟಾ ಗ್ರೂಪ್ ಅಧ್ಯಕ್ಷ, ಪದ್ಮವಿಭೂಷಣ ರತನ್ ಟಾಟಾ ಅವರಿಗೆ ಮಹಾರಾಷ್ಟ್ರದ ಮೊದಲ 'ಉದ್ಯೋಗರತ್ನ ಪ್ರಶಸ್ತಿ - 2023' ನೀಡಿ ಗೌರವಿಸಿದೆ. ಇದು ನಮಗೆ ಗೌರವ ಮತ್ತು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.
ಭಾನುವಾರ ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್ನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ ಅವರ ಮನೆಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಸೀರಂ ಇನ್ಸ್ಟಿಟ್ಯೂಟ್ನ ಕಾರ್ಯ ನಿರ್ವಾಹಣಾಧಿಕಾರಿ ಅದರ್ ಪೂನಾವಾಲಾ ಅವರಿಗೆ ಉದ್ಯೋಗ ಮಿತ್ರ ಪ್ರಶಸ್ತಿ, ಕಿರ್ಲೋಸ್ಕರ್ ಗ್ರೂಪ್ನ ಗೌರಿ ಕಿರ್ಲೋಸ್ಕರ್ ಅವರಿಗೆ ಉದ್ಯೋಗಿನಿ ಪ್ರಶಸ್ತಿ, ಸಹ್ಯಾದ್ರಿ ಫಾರ್ಮ್ ಒಡೆಯ ವಿಲಾಸ್ ಶಿಂಧೆ ಅವರಿಗೆ ಉತ್ಕೃಷ್ಟ ಮರಾಠಿ ಉದ್ಯೋಜಕ್ ಪ್ರಶಸ್ತಿಯನ್ನು ಮಹಾರಾಷ್ಟ್ರ ಗವರ್ನರ್ ರಮೇಶ್ ಬೈಸ್ ಅವರು ಪ್ರದಾನ ಮಾಡಲಿದ್ದಾರೆ.
ಇದನ್ನೂ ಓದಿ : ಮೊಬೈಲ್ ಫೋನ್ ಇಲ್ಲ, ಸೋಶಿಯಲ್ ಮೀಡಿಯಾ ಬಳಸಲ್ಲ, 2 BHKಯಲ್ಲಿ ವಾಸ: ರತನ್ ಟಾಟಾ ಕಿರಿ ಸಹೋದರ ಜಮ್ಮಿ ಜೀವನ!