ಇಂದೋರ್ (ಮಧ್ಯಪ್ರದೇಶ): ಇಂದೋರ್‌ನ ಬೆಂಗಾಲಿ ಕಾಲೋನಿ ಪ್ರದೇಶದ ಶಿಖಾ ಜೈನ್ ಅವರು ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಅಂತಿಮ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಮತ್ತು ಅಖಿಲ ಭಾರತ ಮಟ್ಟದಲ್ಲಿ ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನವೆಂಬರ್ 2022 ರ ಅವಧಿಯ ಸಿಎ ಪರೀಕ್ಷೆಯ ಫಲಿತಾಂಶಗಳನ್ನು ಮಂಗಳವಾರ ಪ್ರಕಟಿಸಿದೆ. ಶಿಖಾ ಅವರು ಸಿಎ ತಯಾರಿಗಾಗಿ ಯಾವುದೇ ಔಪಚಾರಿಕ ತರಬೇತಿ ಪಡೆಯದಿರುವುದು ವಿಶೇಷವಾಗಿದೆ. ಈಗಾಗಲೇ ಸಿಎ ಆಗಿರುವ ಹಿರಿಯ ಸಹೋದರಿ ದಿಶಾ ಜೈನ್ ಅವರು ಶಿಖಾ ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಶಿಖಾ 800ಕ್ಕೆ 617 ಅಂಕ ಗಳಿಸಿದ್ದಾರೆ. ಶಿಖಾ ತನ್ನ ಶಾಲಾ ಶಿಕ್ಷಣವನ್ನು ಸೇಂಟ್ ಅರ್ನಾಲ್ಡ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ.
ಸಾಧನೆಯ ಗುಟ್ಟೇನು?: ಮಾಧ್ಯಮದವರೊಂದಿಗೆ ಮಾತನಾಡಿದ ಶಿಖಾ, ’’ನನ್ನ ಸಹೋದರಿ ಕೂಡ ಸಿಎ ಆಗಿದ್ದಾರೆ. ಅವಳು ಕಷ್ಟಪಟ್ಟು ಕೆಲಸ ಮಾಡುತ್ತ ಸಿಎ ಆಗಿರುವುದನ್ನು ನಾನು ನೋಡುತ್ತಲೇ ಬೆಳೆದಿದ್ದೇನೆ. ನಾನು 12 ನೇ ತರಗತಿಯಲ್ಲಿ ಉತ್ತೀರ್ಣರಾದ ವೇಳೆಯೇ ಸಿಎ ಮಾಡಬೇಕೆಂದು ನಿರ್ಧರಿಸಿದ್ದೆ. ಆದರೆ, ಇದು ಸುಲಭವಾಗಿರಲಿಲ್ಲ. ನನ್ನ ಸಹೋದರಿಯ ಮಾರ್ಗದರ್ಶನ ಮತ್ತು ಕುಟುಂಬದ ನಿರಂತರ ಬೆಂಬಲದಿಂದ ನಾನು ಐಸಿಎಐ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಯಿತು’’ ಎಂದು ಅವರು ಹೇಳಿದರು.
ದಿನಕ್ಕೆ 8ರಿಂದ 10 ಗಂಟೆಗಳ ಕಾಲ ಅಧ್ಯಯನ: ಕಳೆದ ಆರು ತಿಂಗಳಿಂದ ನಾನು ದಿನಕ್ಕೆ ಕನಿಷ್ಠ ಎಂಟರಿಂದ ಹತ್ತು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ. ಯಾವುದೇ ಸಾಮಾಜಿಕ ಮಾಧ್ಯಮ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಮತ್ತು ನನ್ನ ಸಿದ್ಧತೆಗಳ ಮೇಲೆ ಸಂಪೂರ್ಣವಾಗಿ ಗಮನಹರಿಸಿದೆ. ನನ್ನ ಕುಟುಂಬವು ನಿರಂತರವಾಗಿ ನನಗೆ ಬೆಂಬಲ ನೀಡಿತು ಮತ್ತು ನನ್ನ ಮೇಲೆ ಎಂದಿಗೂ ಒತ್ತಡ ಹೇರಲಿಲ್ಲ. ನನ್ನ ಯಶಸ್ಸು ನನ್ನ ಸತತ ಪರಿಶ್ರಮದ ಫಲವಾಗಿದೆ. ನನ್ನ ಸಹೋದರಿಯೇ ನನ್ನ ಸ್ಫೂರ್ತಿಯ ಮೂಲವಾಗಿದ್ದಾರೆ ಮತ್ತು ನನ್ನ ಪೋಷಕರು ಯಾವಾಗಲೂ ಪ್ರತಿ ನಿರ್ಧಾರದಲ್ಲಿ ನನ್ನನ್ನು ಬೆಂಬಲಿಸಿದ್ದಾರೆ ಎಂದು ಶಿಖಾ ತಿಳಿಸಿದರು.
ಮನೆಪಾಠದ ಅವಶ್ಯಕತೆ ಇಲ್ಲದೇ ಸ್ವಯಂ ಓದಿ ಸಾಧನೆ: ಶಿಖಾ ಸಿಎ ಪರೀಕ್ಷೆ ತಯಾರಿಗಾಗಿ ಯಾವುದೇ ತರಬೇತಿಯನ್ನು ತೆಗೆದುಕೊಳ್ಳಲಿಲ್ಲ. ಆದರೆ ತನ್ನ ಅಕ್ಕ ಸೂಚಿಸಿದ ಪುಸ್ತಕಗಳ ಮೂಲಕ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಕೆಲ ಪೂರ್ವ-ರೆಕಾರ್ಡ್ ಆಗಿರುವ ಉಪನ್ಯಾಸಗಳ ಮೂಲಕ ಮಾತ್ರ ಅಧ್ಯಯನ ಮಾಡಿದರು. ವಿದ್ಯಾರ್ಥಿ ಜೀವನದಲ್ಲಿ ಸೋಷಿಯಲ್ ಮೀಡಿಯಾ ದೊಡ್ಡ ಅಡ್ಡಿ. ಅದರಿಂದ ಸಮಯ ವ್ಯರ್ಥವಾಗುತ್ತದೆ. ನೀವು ಶೈಕ್ಷಣಿಕವಾಗಿ ಯಶಸ್ವಿಯಾಗಬೇಕಾದರೆ ಸಾಮಾಜಿಕ ಮಾಧ್ಯಮವನ್ನು ತೊರೆದು ನಿಮ್ಮ ಅಧ್ಯಯನದತ್ತ ಗಮನ ಹರಿಸಬೇಕು ಎಂದು ಶಿಖಾ ಹೇಳಿದರು.
ಶಿಖಾ ಮುಂದಿನ ಆಕಾಂಕ್ಷೆ ಏನು?: ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಶಿಖಾ, ’’ನಾನು ಪುಸ್ತಕಗಳ ಸಂಪರ್ಕ ಕಳೆದುಕೊಳ್ಳಲು ಬಯಸುವುದಿಲ್ಲ. ನಾನು ಈ ವರ್ಷ ಯಾವುದಾದರೂ ಐಐಎಂನಿಂದ ಎಂಬಿಎ ಮುಂದುವರಿಸಲು CAT ಗೆ ಹಾಜರಾಗುತ್ತೇನೆ ಅಥವಾ ಭಾರತೀಯ ಕಂದಾಯ ಸೇವೆಗಳ (IRS) ಅಧಿಕಾರಿಯಾಗಲು ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಲಿದ್ದೇನೆ‘‘ ಎಂದರು.
ನವೆಂಬರ್ 2022 ರಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ 65,291 ವಿದ್ಯಾರ್ಥಿಗಳು ಸಿಎ ಫೈನಲ್‌ನ ಗುಂಪು 1 ರಲ್ಲಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 13,969 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಗುಂಪು 2ರಲ್ಲಿ 64,775 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 12,053 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎರಡೂ ಗುಂಪುಗಳಲ್ಲಿ ಒಟ್ಟು 29,242 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ 11.09 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದೇಶಾದ್ಯಂತ ಒಟ್ಟು 12,825 ವಿದ್ಯಾರ್ಥಿಗಳು ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಇದನ್ನೂ ಓದಿ: ಸಿಎ ಪರೀಕ್ಷೆ ಪಾಸ್ ಮಾಡಿದ ಜವಳಿ ಕೆಲಸಗಾರನ ಮಗ, ಸರ್ಕಾರಿ ಶಾಲೆ ವಿದ್ಯಾರ್ಥಿನಿ