ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡುವಂತಾಗಲು ಮಹಿಳಾ ಮೀಸಲಾತಿ ಕಾನೂನನ್ನು ತುರ್ತಾಗಿ ಮತ್ತು ಕಾಲಮಿತಿಯೊಳಗೆ ಜಾರಿಗೆ ತರಬೇಕೆಂದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಈ ವಿಷಯದಲ್ಲಿ ಅರ್ಜಿದಾರರಿಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಗಮನಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್, ಈ ಅರ್ಜಿಯ ಬದಲಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸುವಂತೆ ಸೂಚಿಸಿದರು. "ಇದರಲ್ಲಿ ನಿಮ್ಮ ವೈಯಕ್ತಿಕ ಆಸಕ್ತಿ ಏನಿದೆ? ಇಲ್ಲಿ ಕಾಣಿಸುತ್ತಿರುವುದೆಲ್ಲ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ" ಎಂದು ನ್ಯಾಯಾಧೀಶರು ಹೇಳಿದರು. ಇದಕ್ಕುತ್ತರಿಸಿದ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರು ಸಮಸ್ತ ಮಹಿಳಾ ಕುಲವನ್ನು ಪ್ರತಿನಿಧಿಸುತ್ತಾರೆ ಎಂದು ವಾದಿಸಿದರು.
ಅನ್ವಯವಾಗುವ ನಿಯಮಗಳ ಪ್ರಕಾರ ಪಿಐಎಲ್ ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ಪ್ರಸ್ತುತ ಸಲ್ಲಿಸಲಾದ ಅರ್ಜಿಯನ್ನು ಹಿಂತೆಗೆದುಕೊಳ್ಳಲು ನ್ಯಾಯಮೂರ್ತಿ ಪ್ರಸಾದ್ ಅರ್ಜಿದಾರರಿಗೆ ಅವಕಾಶ ನೀಡಿದರು. ಈ ಸಂದರ್ಭದಲ್ಲಿ ವಾದಿಸಿದ ಕೇಂದ್ರ ಸರ್ಕಾರ ಪರ ವಕೀಲರು ಕಾನೂನು ಅನುಷ್ಠಾನದ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಧಿಕೃತವಾಗಿ ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದು ಕರೆಯಲ್ಪಡುವ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಾಗಿಡುವ ಉದ್ದೇಶ ಹೊಂದಿದೆ. ಸೆಪ್ಟೆಂಬರ್ 29 ರಂದು ರಾಷ್ಟ್ರಪತಿಗಳ ಒಪ್ಪಿಗೆಯ ನಂತರ ಈ ಮಸೂದೆಯು ಕಾನೂನಾಗಿ ಮಾರ್ಪಟ್ಟಿದೆ. ಆದಾಗ್ಯೂ, ಈ ಕಾನೂನು ತಕ್ಷಣವೇ ಜಾರಿಯಾಗುತ್ತಿಲ್ಲ. ಹೊಸ ಜನಗಣತಿ ನಡೆದ ನಂತರವೇ ಇದು ಜಾರಿಗೆ ಬರಲಿದೆ. ಅದರ ಆಧಾರದ ಮೇಲೆ ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸಲು ಡಿಲಿಮಿಟೇಶನ್ ಕೈಗೊಳ್ಳಲಾಗುವುದು.
ಹೀಗಾಗಿ ಮಹಿಳಾ ಮೀಸಲು ಕಾನೂನನ್ನು ಈ ತಕ್ಷಣವೇ ಜಾರಿ ಮಾಡಬೇಕೆಂದು ಯೋಗಮಯ ಎಂ.ಜಿ. ಎಂಬುವರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಭಾರತದ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮಹಿಳಾ ಮೀಸಲಾತಿ ಕಾನೂನಿನ ಪರಿಣಾಮಕಾರಿ ಅನುಷ್ಠಾನ ನಿರ್ಣಾಯಕವಾಗಿದೆ ಮತ್ತು ಇದರಲ್ಲಿನ ವಿಳಂಬದಿಂದ ಪ್ರಜಾಪ್ರಭುತ್ವದ ತತ್ವಗಳಿಗೆ ಧಕ್ಕೆಯಾಗಲಿದೆ ಎಂದು ಯೋಗಮಯ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ದಯಾಮರಣ ಕೋರಿ ನ್ಯಾಯಾಧೀಶೆ ಬಹಿರಂಗ ಪತ್ರ: ಇವತ್ತೇ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್