ಹೈದರಾಬಾದ್: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳಾಗಿದೆ. ಆದರೂ, ಪೌಷ್ಟಿಕಾಂಶದ ಭದ್ರತೆ ಮತ್ತು ಆರೋಗ್ಯಕರ ಜೀವನವು ದೇಶದ ಅಸಂಖ್ಯಾತ ನಾಗರಿಕರಿಗೆ ದೂರದ ಕನಸಾಗಿ ಉಳಿದಿದೆ. ಲಕ್ಷಾಂತರ ಮಕ್ಕಳ ಭವಿಷ್ಯವು ಬಿಟ್ಟುಬಿಡದೇ ಕಾಡುತ್ತಿರುವ ಅಪೌಷ್ಟಿಕತೆಯ ಭೀತಿಯಿಂದ ಹಾಳಾಗುತ್ತಿದೆ. ಹುಟ್ಟಿದ ಕ್ಷಣದಿಂದಲೇ ಮಕ್ಕಳು ಈ ಅವಸ್ಥೆ ಅನುಭವಿಸಬೇಕಾಗಿದೆ. ಇದರ ಭೀಕರ ಸ್ಥಿತಿಯನ್ನು ವಿಶ್ವ ಹಸಿವು ಸೂಚ್ಯಂಕ (World Hunger Index) ತೆರೆದಿಟ್ಟಿದೆ.
2020ರಲ್ಲಿ ಭಾರತವು ವಿಶ್ವ ಹಸಿವು ಸೂಚ್ಯಂಕದಲ್ಲಿ 94ನೇ ಸ್ಥಾನ ಹೊಂದಿತ್ತು. ನಂತರದ ವರ್ಷಗಳಲ್ಲಿ 101 ಹಾಗೂ 107 ಸ್ಥಾನಕ್ಕೆ ಇಳಿದಿತು. ಪ್ರಸ್ತುತ, ಇತ್ತೀಚಿನ ಸೂಚ್ಯಂಕದಲ್ಲಿ 125 ರಾಷ್ಟ್ರಗಳ ಪೈಕಿ ಭಾರತವು 111ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಈ ಸೂಚ್ಯಂಕವು ಹಸಿವಿನ ಬಹುಆಯಾಮದ ಸ್ವರೂಪಗಳಾದ ಅಪೌಷ್ಟಿಕತೆ, ಮಕ್ಕಳ ಬೆಳವಣಿಗೆ ಕುಂಠಿತ, ಮಕ್ಕಳ ಬೆಳವಣಿಗೆ ಕ್ಷೀಣತೆ ಮತ್ತು ಮಕ್ಕಳ ಮರಣ ಎಂಬ ನಾಲ್ಕು ಪ್ರಮುಖ ಸೂಚಕಗಳನ್ನು ವಿಶ್ಲೇಷಿಸುತ್ತಿದೆ. ಈ ಆತಂಕಕಾರಿ ವಾಸ್ತವಕ್ಕೆ ತದ್ವಿರುದ್ಧವಾಗಿ ಕೇಂದ್ರ ಸರ್ಕಾರವು ವಿಶ್ವ ಹಸಿವು ಸೂಚ್ಯಂಕದ ಸಂಶೋಧನೆಗಳನ್ನು ತಳ್ಳಿ ಹಾಕಿದೆ. ಇದು 'ಹಸಿವಿನ ದೋಷಪೂರಿತ ಮಾಪನ'ವಾಗಿದ್ದು, ಇದು ಭಾರತದ ನಿಜವಾದ ಸ್ಥಿತಿಯನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರ ಏನೇ ಹೇಳಿದರೂ, 2016-18ರ ಸಮಗ್ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆಯೇ ಈ ಅಶುಭದ ಎಚ್ಚರಿಕೆ ಕೊಟ್ಟಿದೆ. ಆಹಾರದ ಕೊರತೆಯ ಭೀತಿಯು ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಮಿತಿ ಮೀರಿ ತನ್ನ ವ್ಯಾಪ್ತಿಯನ್ನು ಆವರಿಸಿಕೊಂಡಿದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದೆ ಎಂದು ವರದಿಯು ನಿಸ್ಸಂದಿಗ್ಧವಾಗಿ ಪ್ರಕಟಿಸಿದೆ. ಇದು ನಮ್ಮ ರಾಷ್ಟ್ರದ ಆರೋಗ್ಯದ ಕಠೋರ ಚಿತ್ರಣವನ್ನೂ ಬಿಂಬಿಸಿದೆ. ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿದ ಇತ್ತೀಚಿನ ಸಂಶೋಧನೆಯು, ಶೇ.71ರಷ್ಟು ಭಾರತೀಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ. ಇದು ವಾರ್ಷಿಕವಾಗಿ 17 ಲಕ್ಷ ಜನರ ಜೀವವನ್ನು ಬಲಿತೆಗೆದುಕೊಳ್ಳುತ್ತಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಕುಂಠಿತ ಬೆಳವಣಿಗೆಯಿಂದ ಬಳಲುತ್ತಿರುವ ಶೇ.68ರಷ್ಟು ಮಕ್ಕಳ ಸಾವಿಗೆ ಅಪೌಷ್ಟಿಕತೆಯೇ ಕಾರಣ ಎಂದು ಅಧ್ಯಯನಗಳು ಹೇಳುತ್ತವೆ.
ದೇಶದಲ್ಲಿ ಹಲವಾರು ತಾಯಂದಿರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಮತ್ತು ಶಿಶುಗಳ ಅಪೌಷ್ಟಿಕತೆಯು ಮುಗ್ಧ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಪೋಷಣ್ ಅಭಿಯಾನ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ) ನಂತಹ ನಿರ್ಣಾಯಕ ಯೋಜನೆಗಳಿಗೆ ಮೀಸಲಿಟ್ಟ ಹಣದ ಪರಿಣಾಮಕಾರಿ ಬಳಕೆ ಮಾಡದ ಬಗ್ಗೆ ಡಾ. ವಿನಯ್ ಸಹಸ್ರಬುದ್ಧೆ ಅಧ್ಯಕ್ಷತೆಯ ಸಂಸದೀಯ ಸ್ಥಾಯಿ ಸಮಿತಿಯ ವರದಿಯು ಬೆಳಕು ಚೆಲ್ಲುವ ಮೂಲಕ ಆತಂಕಕಾರಿ ಸಂಗತಿಗಳನ್ನು ಹೊರ ಹಾಕಿದೆ. ದೇಶವು ಇತರ ರಂಗಗಳಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿದ್ದರೂ ನಾಗರಿಕರು ಹಸಿವಿನಿಂದ ಉಂಟಾಗುವ ಸಾವು-ನೋವುಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ಹೃದಯ ವಿದ್ರಾವಕ ಸತ್ಯಕ್ಕೆ ಸುಪ್ರೀಂ ಕೋರ್ಟ್ ಹೇಳಿಕೆ ಕೂಡ ನಿದರ್ಶನವಾಗಿದ್ದು, ಸಾಧ್ಯವಾದಷ್ಟು ಜನರಿಗೆ ಪಡಿತರಗಳನ್ನು ವಿತರಿಸಲು ನಿರ್ದೇಶನ ನೀಡಿದೆ.
ಇಷ್ಟೇ ಅಲ್ಲ, 15ನೇ ಹಣಕಾಸು ಆಯೋಗದ ವರದಿ ಸಹ ಮಕ್ಕಳಲ್ಲಿನ ಅಪೌಷ್ಟಿಕತೆಯು ನಮ್ಮ ರಾಷ್ಟ್ರದ ಪ್ರಗತಿಗೆ ಗಣನೀಯ ತೊಡಕಾಗಿದೆ ಎಂದು ಒತ್ತಿಹೇಳುತ್ತದೆ. ಇದಕ್ಕೆ ಪೂರಕವಾಗಿ, ನೀತಿ ಆಯೋಗವು ಸರಿಯಾದ ಸ್ತನ್ಯಪಾನವು ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯ ಶೇ.60ರಷ್ಟು ಸಮಸ್ಯೆಯನ್ನು ಸಮರ್ಥವಾಗಿ ನಿವಾರಿಸುತ್ತದೆ ಎಂದು ಹೇಳಿದೆ. ಆದರೆ, ತಾಯಂದಿರೇ ರಕ್ತಹೀನತೆಯಿಂದ ಬಳಲುತ್ತಿರುವಾಗ ನೈಸರ್ಗಿಕ ಪೋಷಣೆಯನ್ನು ಹೇಗೆ ಒದಗಿಸಬಹುದು ಎಂಬ ಮೂಲ ವಿಷಯವನ್ನು ಗ್ರಹಿಸುವ ಅಗತ್ಯವಿದೆ. ನೇಪಾಳವು ಉತ್ತಮವಾದ ಪೋಷಣೆಯ ಯೋಜನೆಗಳು ಮತ್ತು ನವಜಾತ ಶಿಶುಗಳು ಮತ್ತು ಶುಶ್ರೂಷಾ ತಾಯಂದಿರ ಬಗ್ಗೆ ಅಚಲವಾದ ಗಮನ ಹರಿಸುವ ಮೂಲಕ ತಾಯಿ ಮತ್ತು ಶಿಶುಪಾಲನೆಯಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸಿದೆ. ಇದರೊಂದಿಗೆ ಒಂದು ಮಾದರಿ ರಾಷ್ಟ್ರವಾಗಿ ನಿಂತಿದೆ. ಬಾಂಗ್ಲಾದೇಶ ಕೂಡ ಕೇವಲ ಕಾಲು ಶತಮಾನದ ಹಿಂದೆ ಕಡಿಮೆ ತೂಕದ ಮಕ್ಕಳನ್ನು ಹೊಂದಿತ್ತು. ಆದರೆ, ತಾಯಿಯ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಆರೋಗ್ಯ ರಕ್ಷಣೆ, ನೈರ್ಮಲ್ಯವನ್ನು ಉತ್ತೇಜಿಸಿ ದೃಢವಾದ ಆರೋಗ್ಯ ಉಪಕ್ರಮಗಳನ್ನು ಜಾರಿಗೊಳಿಸಿ ಆ ದೇಶವು ಗಮನಾರ್ಹವಾದ ಬದಲಾವಣೆ ಕಂಡಿದೆ.
ದುರದೃಷ್ಟವಶಾತ್ ವಿಶ್ವ ಹಸಿವು ಸೂಚ್ಯಂಕವು ಶೇ.18.7ರಷ್ಟು ಭಾರತೀಯ ಮಕ್ಕಳು ತಮ್ಮ ಎತ್ತರಕ್ಕೆ ಕಡಿಮೆ ತೂಕವನ್ನು ಹೊಂದಿದ್ದಾರೆ ಎಂಬ ಹೇಳುವ ಮೂಲಕ ನಮ್ಮನ್ನು ಎಚ್ಚರಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಈ ಸಮಸ್ಯೆಯ ಪ್ರಮಾಣವನ್ನು ಒತ್ತಿಹೇಳುತ್ತದೆ. ಶೇ.19.3ರಷ್ಟು ಹುಡುಗರು ಮತ್ತು ಹುಡುಗಿಯರು ತಮ್ಮ ಎತ್ತರಕ್ಕಿಂತ ಕಡಿಮೆ ತೂಕ ಹೊಂದಿದ್ದಾರೆ. ಇದಲ್ಲದೆ, ನಮ್ಮ ದೇಶದಲ್ಲಿ ಶೇ.35ಕ್ಕಿಂತ ಹೆಚ್ಚು ಕುಂಠಿತ ಮಕ್ಕಳು ಅಪೌಷ್ಟಿಕತೆಯ ನಿರಂತರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಈ ಬಿಕ್ಕಟ್ಟನ್ನು ನಿವಾರಿಸಲು ರಾಷ್ಟ್ರದಾದ್ಯಂತ 14 ಲಕ್ಷ ಅಂಗನವಾಡಿ ಸೌಲಭ್ಯಗಳು, ಸುಮಾರು 10 ಕೋಟಿ ಮಕ್ಕಳು, ಶಿಶುಗಳು ಮತ್ತು ಶುಶ್ರೂಷ ತಾಯಂದಿರಿಗೆ ಪೌಷ್ಟಿಕಾಂಶವನ್ನು ಒದಗಿಸುವ ಕಾರ್ಯದಲ್ಲಿ ತೊಡಗಿವೆ. ಆದಾಗ್ಯೂ, ಈ ಸದುದ್ದೇಶದ ಸಂಸ್ಥೆಗಳು ಹಲವಾರು ಅಡೆತಡೆಗಳನ್ನು ಎದುರಿಸುತ್ತಿವೆ. ಸಿಬ್ಬಂದಿ ಖಾಲಿ ಹುದ್ದೆಗಳಿಂದ ಹಿಡಿದು ಮೇಲ್ವಿಚಾರಣೆ ಸವಾಲುಗಳು ಮತ್ತು ವಿತರಣಾ ವ್ಯವಸ್ಥೆಯ ಅಡೆತಡೆಗಳೊಂದಿಗೆ ನಿರೀಕ್ಷೆ ಪರಿಣಾಮ ಬೀರುತ್ತಿಲ್ಲ.
ಇದೇ ವೇಳೆ, ಆರೋಗ್ಯಕರ ನಾಗರಿಕತೆಯು ನವಭಾರತದ ನಿರ್ಮಾಣಕ್ಕೆ ಅಡಿಪಾಯ ಎಂಬ ಪ್ರಧಾನಿ ಮೋದಿಯವರ ಮಾತು ಸಂಪೂರ್ಣ ನಿಜ. ಆದರೆ, ಪೌಷ್ಟಿಕಾಂಶವು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಹೀಗಾಗಿ ಸರ್ಕಾರಗಳು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು. ಆಹಾರ ಮತ್ತು ಪೌಷ್ಟಿಕಾಂಶ ಯೋಜನೆಗಳನ್ನು ನಿಷ್ಪಕ್ಷಪಾತವಾಗಿ ಜಾರಿಗೊಳಿಸಬೇಕು. ಜೊತೆಗೆ ಭ್ರಷ್ಟತೆಯಲ್ಲಿ ತೊಡಗಿರುವವರು ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ. ನಮ್ಮ ರಾಷ್ಟ್ರದ ಭವಿಷ್ಯದ ಪೀಳಿಗೆಗೆ ಚೈತನ್ಯ ಮತ್ತು ಪೋಷಣೆ ತುಂಬಲು ವಿಫಲವಾದರೆ ನಮ್ಮ ದೇಶದ ಭವಿಷ್ಯದ ಮೂಲತತ್ವವನ್ನು ನಿಜವಾಗಿಯೂ ಅಪಾಯಕ್ಕೆ ತಳ್ಳಿದಂತಾಗುತ್ತದೆ.
ಇದನ್ನೂ ಓದಿ: 2023 ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 111ನೇ ಸ್ಥಾನ: ವರದಿ ದೋಷಪೂರಿತ ಎಂದ ಸರ್ಕಾರ