ನವದೆಹಲಿ : ಹೊಸ ವರ್ಷದಂದು ಗಲ್ವಾನ್ ವ್ಯಾಲಿಯಲ್ಲಿ ಭಾರತೀಯ ಸೇನೆ ತ್ರಿವರ್ಣ ಧ್ವಜ ಹಾರಿಸಿದೆ. ಇದಕ್ಕೆ ಸಂಬಧಿಸಿದಂತೆ ಸೇನೆ ಫೋಟೋವೊಂದನ್ನ ಬಿಡುಗಡೆ ಮಾಡಿದೆ.
ಸುಮಾರು 30 ಭಾರತೀಯ ಯೋಧರು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ವರು ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರು ತಮ್ಮ ದೇಶದ ಧ್ವಜ ಹಾರಾಟ ನಡೆಸಿದ್ದಾರೆಂದು ಕಾಂಗ್ರೆಸ್ ಪಕ್ಷ ಆರೋಪಿಸಿತ್ತು.
ಇದಕ್ಕೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆ, ಚೀನಾ ಯೋಧರು ತಮ್ಮ ಪ್ರದೇಶದಲ್ಲಷ್ಟೇ ಧ್ವಜ ಹಾರಿಸಿದ್ದಾರೆ ಎಂದು ತಿಳಿಸಿದೆ. ಭಾರತ-ಚೀನಾ ಗಡಿ ವಿವಾದ ನಡೆಯುತ್ತಿರುವ ಗಲ್ವಾನ್ ನದಿ ಪ್ರದೇಶದಲ್ಲಿ ಚೀನಾ ಸೈನಿಕರು ಧ್ವಜಾರೋಹಣ ಮಾಡಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ತಾಯಿ, ಮಗು ದುರ್ಮರಣ
ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳ ಮರುನಾಮಕರಣ ಮಾಡಲು ಚೀನಾ ಮುಂದಾಗಿದೆ ಎಂದು ಸುದ್ದಿಯಾಗಿತ್ತು. ಮಾಧ್ಯಮಗಳ ಪ್ರಕಾರ 15 ಸ್ಥಳಗಳಿಗೆ ಚೀನಾ ಹೊಸ ಹೆಸರಿಟ್ಟಿದೆ.
ಇದೇ ವಿಚಾರವಾಗಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತದ ಗಲ್ವಾನ್ ಕಣಿವೆಯಲ್ಲಿ ಚೀನಾ ತನ್ನ ಧ್ವಜ ಹಾರಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ಯಾವಾಗ ಮೌನ ಮುರಿಯಲಿದ್ದಾರೆ? ಎಂದು ಪ್ರಶ್ನಿಸಿದ್ದರು.