ನವದೆಹಲಿ : ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಕೋವಿಡ್ -19 ಲಸಿಕೆಗಳ ಲಭ್ಯತೆ, ಬಳಸಿಕೊಳ್ಳುವಿಕೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಜಾಗತಿಕ ಸಮುದಾಯ ಎದುರಿಸುತ್ತಿರುವ ಸವಾಲುಗಳಿಗೆ ಸಂಬಂಧಿಸಿದ ಐದು ಆತಂಕಗಳನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ ) ಯಲ್ಲಿ ಭಾರತ ಮಂಡಿಸಿದೆ.
ವಿದೇಶಿ ಗಣ್ಯರ ಸಮ್ಮುಖದಲ್ಲಿ 2523 (2020) ನಿರ್ಣಯದ ಅನುಷ್ಠಾನದ ಕುರಿತು ಮುಕ್ತ ಚರ್ಚೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಯುಎನ್ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ಕೋವಿಡ್ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ಸಚಿವ ಜೈ ಶಂಕರ್ ಆಶಾಭಾವನೆ ವ್ಯಕ್ತಪಡಿಸಿದರು. ಅಲ್ಲದೇ, ಭಾರತ ಹಂಚಿಕೊಳ್ಳಲು ಬಯಸುವ ಐದು ವಿಷಯಗಳನ್ನು ಮಂಡಿಸಿದರು.
ಅವುಗಳಲ್ಲಿ ಮೊದಲನೆಯದು, ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಜಾಗತಿಕ ಸಮನ್ವಯದ ಕೊರತೆಯು ಸಂಘರ್ಷ ಪೀಡಿತ ಪ್ರದೇಶಗಳು ಮತ್ತು ಬಡ ದೇಶಗಳಿಗೆ ಸವಾಲಾಗಿದೆ. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಮಾಹಿತಿ ಪ್ರಕಾರ ಆ ಪ್ರದೇಶಗಳಲ್ಲಿ 60 ದಶಲಕ್ಷಕ್ಕೂ ಹೆಚ್ಚು ಜನರು ಅಪಾಯದಲ್ಲಿದ್ದಾರೆ.
ಎರಡನೇಯದಾಗಿ, ಪ್ರಸ್ತುತ, ಜಾಗತಿಕವಾಗಿ ಲಸಿಕೆಗಳ ವಿತರಣೆಯಲ್ಲಿ ಅಸಮಾನತೆಯಿದೆ, ಕೋವಿಡ್ ಪ್ರಭಾವ ತಗ್ಗಿಸಲು ಲಸಿಕೆಗಳ ಬಳಕೆಯಲ್ಲಿ ಸಮಾನತೆಯು ಮುಖ್ಯವಾಗಿದೆ.
ಓದಿ : ಕಪ್ಪು ವರ್ಣೀಯ ಮಹಿಳೆಯನ್ನು ಸರಕಾರಿ ಮೆಡಿಕೇರ್ ಸಂಸ್ಥೆ ಮುಖ್ಯಸ್ಥೆಯಾಗಿ ಆಯ್ಕೆ ಮಾಡಿದ ಬೈಡನ್
ಮೂರನೆಯದಾಗಿ, ಈ ಅಸಮಾನತೆಯನ್ನು ಹೋಗಲಾಡಿಸಲು ಕೋವಿಡ್ ಲಸಿಕೆ ಅಭಿಯಾನದ ಚೌಕಟ್ಟಿನೊಳಗೆ ಸಹಕಾರ ಅಗತ್ಯ. ಅದು, ವಿಶ್ವದ ಬಡ ರಾಷ್ಟ್ರಗಳಿಗೆ ಲಸಿಕೆ ಪಡೆಯುವಲ್ಲಿ ಸಹಕರಿಸಲಿದೆ.
ನಾಲ್ಕನೆಯದು ಆರ್ಥಿಕ ದೃಷ್ಟಿಕೋನದಿಂದ ಲಸಿಕೆ ವಿತರಣೆ ವೆಚ್ಚವು ಹೆಚ್ಚಳವಾಗಿದೆ. ಲಸಿಕೆ ಅಸಮಾನತೆ ಪರಿಹರಿಸಲು ಅಂತಾರಾಷ್ಟ್ರೀಯ ಸಮುದಾಯವು ವಿಫಲವಾದರೆ ಸುಮಾರು 9.9 ಟ್ರಿಲಿಯನ್ ಡಾಲರ್ಗಳಷ್ಟು ನಷ್ಟ ಅನುಭವಿಸುತ್ತದೆ ಎಂದು ಇಂಟರ್ ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ಭವಿಷ್ಯ ನುಡಿದಿದೆ.
ಐದನೆಯದಾಗಿ, ಸಾಂಪ್ರದಾಯಿಕ ರೋಗ ನಿರೋಧಕ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಕನಿಷ್ಠ 68 ದೇಶಗಳಲ್ಲಿ ಸುಮಾರು 80 ಮಿಲಿಯನ್ ಮಕ್ಕಳು ದಡಾರ, ಪೋಲಿಯೊ ಅಪಾಯಕ್ಕೆ ಒಳಗಾಗುತ್ತಾರೆ ಎಂದು ಸಚಿವರು ಒತ್ತಿ ಹೇಳಿದರು.