ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 2,08,921 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 2,95,955 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಮತ್ತು 4,157 ಮಂದಿ ಮೃತಪಟ್ಟಿದ್ದಾರೆ.
ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 2,71,57,795ಕ್ಕೆ ಏರಿದೆ. ಇದುವರೆಗೆ 2,43,50,816 ಮಂದಿ ಗುಣಮುಖರಾಗಿದ್ದು 3,11,388 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ, 24,95,591 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮೊದಲ ಸ್ಥಾನದಲ್ಲಿ ಕರ್ನಾಟಕ:
ಕರ್ನಾಟಕ 4.4 ಲಕ್ಷ ಪ್ರಕರಣಗಳೊಂದಿಗೆ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯ ಎನಿಸಿದೆ. ಮಹಾರಾಷ್ಟ್ರ 3.3 ಲಕ್ಷ ಸಕ್ರಿಯ ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, 3 ಲಕ್ಷ ಪ್ರಕರಣಗಳೊಂದಿಗೆ ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಕೇರಳದಲ್ಲಿ 2.6 ಲಕ್ಷ, ಆಂಧ್ರ ಪ್ರದೇಶದಲ್ಲಿ 2 ಲಕ್ಷ ಸಕ್ರಿಯ ಪ್ರಕರಣಗಳಿವೆ.
20 ಕೋಟಿ ಜನರಿಗೆ ಲಸಿಕೆ:
ಕೋವಿಡ್ ಲಸಿಕೆಯ ಲಭ್ಯತೆಗೆ ಅನುಗುಣವಾಗಿ ಆಯಾ ರಾಜ್ಯಗಳಲ್ಲಿ ಅಭಿಯಾನ ನಡೆಯುತ್ತಿದೆ. ದೇಶದಲ್ಲಿ ಮಂಗಳವಾರದವರೆಗೆ 20,06,62,456 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.