ಚಂಡೀಗಢ: ಪಂಜಾಬ್‌ನ 18ನೇ ಮುಖ್ಯಮಂತ್ರಿಯಾಗಿ ಎಎಪಿ ನಾಯಕ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಮರು ದಿನವೇ 3 ದಿನಗಳ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಅಮೃತಸರ ದಕ್ಷಿಣದ ಎಎಪಿ ಶಾಸಕ ಇಂದರ್‌ಬೀರ್ ಸಿಂಗ್ ನಿಜ್ಜಾರ್ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು.
ಇದಾದ ಬಳಿಕ ಸ್ಪೀಕರ್ ಆಯ್ಕೆ ನಡೆಯಲಿದೆ. ಪಂಜಾಬ್ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಜ್ಜರ್ ಅವರಿಗೆ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದ್ದರು. ಹೊಸ ಸರ್ಕಾರ ರಚನೆಯಾದಾಗ ಮೊದಲು ಹಂಗಾಮಿ ಸ್ಪೀಕರ್ ಅವರನ್ನು ನೇಮಿಸಲಾಗುತ್ತದೆ. ಬಳಿಕ ಎಲ್ಲ ನೂತನ ಶಾಸಕರಿಗೆ ಸ್ಪೀಕರ್ ಪ್ರಮಾಣ ವಚನ ಬೋಧಿಸುವುದು ವಾಡಿಕೆ.
ಸ್ಪೀಕರ್ ಆಯ್ಕೆಗೆ ಸಂಬಂಧಿಸಿದಂತೆ ಆಯ್ಕೆ ಪ್ರಕ್ರಿಯೆಯ ಪ್ರಕಾರ, ಚುನಾಯಿತ ಶಾಸಕರಲ್ಲಿ ಒಬ್ಬರು ಶಾಸಕರನ್ನು ಸ್ಪೀಕರ್ ಮಾಡಲು ಶಿಫಾರಸು ಮಾಡಲಾಗುತ್ತದೆ. ಇತರ ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಅಂತಿಮವಾಗಿ ಸ್ಪೀಕರ್ ಆಯ್ಕೆ ಮಾಡಲಾಗುತ್ತದೆ.
ಆಮ್ ಆದ್ಮಿ ಪಕ್ಷವು ಪ್ರಸ್ತುತ ಒಟ್ಟು 117 ಸ್ಥಾನಗಳಲ್ಲಿ 92 ಶಾಸಕರನ್ನು ಗೆಲ್ಲಿಸಿಕೊಂಡಿದೆ. ಇದ್ದರಿಂದಾಗಿ ಆಡಳಿತ ಪಕ್ಷದ ಶಿಫಾರಸಿನ ಮೇರೆಗೆ ಸ್ಪೀಕರ್ ಅವರನ್ನು ನೇಮಿಸಲಾಗುತ್ತದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಎಸ್‌ಬಿಎಸ್ ನಗರದ ಅವರ ಸ್ವಗ್ರಾಮ ಖಟ್ಕರ್ ಕಲಾನ್‌ನಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಎಎಪಿ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಹಿರಿಯ ನಾಯಕರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
ಇದನ್ನೂ ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ಪದಗ್ರಹಣದ ವೇಳೆ 7 ವರ್ಷದ ಬಳಿಕ ತಾಯಿಗೆ ಪುತ್ರ ಸಿಕ್ಕ!