ಖನ್ನಾ (ಪಂಜಾಬ್): ಅಂತಾರಾಜ್ಯ ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಗ್ಯಾಂಗ್ವೊಂದನ್ನು ಪಂಜಾಬ್ ಪೊಲೀಸರು ಭೇದಿಸಿದ್ದು, ಬಿಎಸ್ಸಿ ವಿದ್ಯಾರ್ಥಿ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ಕು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 18ರಿಂದ 20 ವರ್ಷದೊಳಗಿನ ಯುವಕರು ಎಂದು ಖನ್ನಾ ಎಸ್ಎಸ್ಪಿ ಅಮ್ನೀತ್ ಕೋಂಡಾಲ್ ತಿಳಿಸಿದ್ದಾರೆ.
''ಬಿಕ್ರಂಜೀತ್ ಸಿಂಗ್, ಜಶನ್ಪ್ರೀತ್ ಸಿಂಗ್, ದಲ್ಜೀತ್ ಸಿಂಗ್ ಮತ್ತು ಜಶನ್ದೀಪ್ ಸಿಂಗ್ ಹಾಗೂ ವಪಿಂದರ್ ಸಿಂಗ್ ಬಂಧಿತರು. ಈ ಪೈಕಿ ನಾಲ್ವರು ಪಂಜಾಬ್ ನಿವಾಸಿಗಳಿದ್ದು, ವಪಿಂದರ್ ಸಿಂಗ್ ಮಾತ್ರ ಮಧ್ಯಪ್ರದೇಶದ ಮೂಲದವ. ಈತ ಕಾಲೇಜೊಂದರಲ್ಲಿ ಬಿಎಸ್ಸಿ ಓದುತ್ತಿದ್ದಾನೆ. ಎಲ್ಲರೂ ಸಾಮಾಜಿಕ ಜಾಲತಾಣದ ಮೂಲಕ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬಂದಿದ್ದರು. ನಂತರ ತಮ್ಮದೇ ಆದ ಶಸ್ತ್ರಾಸ್ತ್ರ ಪೂರೈಕೆ ಗ್ಯಾಂಗ್ ಕಟ್ಟಿಕೊಂಡಿದ್ದರು'' ಎಂದು ಎಸ್ಎಸ್ಪಿ ಅಮ್ನೀತ್ ಹೇಳಿದ್ದಾರೆ.
ಬಲೆಗೆ ಬಿದ್ದಿದ್ದು ಹೇಗೆ?: ''ಇತ್ತೀಚೆಗೆ ಎಸ್ಪಿ ಪ್ರಜ್ಞಾ ಜೈನ್ ಮಾರ್ಗದರ್ಶನದಲ್ಲಿ ದೋರಹಾ ಪ್ರದೇಶದಲ್ಲಿ ರಸ್ತೆ ತಪಾಸಣೆ ಕೈಗೊಳ್ಳಲಾಗಿತ್ತು. ಈ ವೇಳೆ ಸಂಚರಿಸುತ್ತಿದ್ದ ಬಿಕ್ರಂಜೀತ್ ಸಿಂಗ್, ಜಶನ್ಪ್ರೀತ್ ಸಿಂಗ್, ದಲ್ಜೀತ್ ಸಿಂಗ್ ಹಾಗೂ ಜಶನ್ದೀಪ್ ಸಿಂಗ್ನನ್ನು ತಪಾಸಣೆಗೆ ಒಳಪಡಿಸಿದಾಗ ಇವರ ಬಳಿಯಿದ್ದ ಬ್ಯಾಗ್ನಲ್ಲಿ ಒಂದು ಪಿಸ್ತೂಲ್ ಪತ್ತೆಯಾಗಿತ್ತು. ಈ ಕುರಿತು ಹೆಚ್ಚಿನ ತನಿಖೆಗೆ ಡಿಎಸ್ಪಿ ಪವನ್ಜೀತ್ ಚೌಧರಿ ಹಾಗೂ ಕೇಂದ್ರ ಗುಪ್ತಚರ ವಿಭಾಗದ ಅಮನ್ದೀಪ್ ಸಿಂಗ್ ನೇತೃತ್ವದ ತಂಡ ರಚನೆ ಮಾಡಲಾಗಿತ್ತು'' ಎಂದು ಎಸ್ಎಸ್ಪಿ ಮಾಹಿತಿ ನೀಡಿದ್ದಾರೆ.
''ಈ ತನಿಖೆಯ ಭಾಗವಾಗಿ ಬಂಧಿತ ನಾಲ್ವರನ್ನು ವಿಚಾರಣೆಗೆ ನಡೆಸಿದಾಗ ಪಿಸ್ತೂಲ್ ಅನ್ನು ಮಧ್ಯಪ್ರದೇಶದ ಬಿಂದ್ ಜಿಲ್ಲೆಯ ನಿವಾಸಿಯಾದ ವಪಿಂದರ್ ಸಿಂಗ್ನಿಂದ ಪಡೆಯಲಾಗಿದೆ ಎಂದು ಬಾಯ್ಬಿಟ್ಟಿದ್ದಾರೆ. ಅಂತೆಯೇ, ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ ವಪಿಂದರ್ ಸಿಂಗ್ ಮನೆ ಮೇಲೆ ದಾಳಿ ಆತನನ್ನು ಬಂಧಿಸಲಾಗಿದೆ. ಅಲ್ಲದೇ, ಈತ ಬಳಿಯಿಂದ ಮೂರು ಪಿಸ್ತೂಲ್ಗಳನ್ನು ಜಪ್ತಿ ಮಾಡಲಾಗಿದೆ'' ಎಂದು ಅವರು ತಿಳಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಮಾರಾಟ: ''ಬಂಧಿತ ವಪಿಂದರ್ ಸಿಂಗ್ ತನ್ನ ಓದಿನ ಸಮಯದಲ್ಲೇ ಮೊದಲಿಗೆ ಇತರರ ಆಜ್ಞೆಯಂತೆ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ಮಾಡುತ್ತಿದ್ದ. ನಂತರ ತನ್ನದೇ ಆದ ಗ್ಯಾಂಗ್ ಕಟ್ಟಿಕೊಳ್ಳಲು ನಿರ್ಧರಿಸಿದ್ದ. ಈ ವೇಳೆ ಪಂಜಾಬ್ನ ಬಿಕ್ರಂಜೀತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಕ್ಕೆ ಬಂದಿದ್ದಾನೆ. ಆಗ ಇಬ್ಬರು ಸೇರಿಕೊಂಡು ಶಸ್ತ್ರಾಸ್ತ್ರ ಪೂರೈಕೆ ದಂಧೆ ಆರಂಭಿಸಿದ್ದಾರೆ. ಇಂದೋರ್ನಲ್ಲಿ ಕಡಿಮೆ ಬೆಲೆಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ವಪಿಂದರ್ ಖರೀದಿಸಿ ಪಂಜಾಬ್ಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ರವಾನಿಸುತ್ತಿದ್ದ. ಈ ದಂಧೆಯಲ್ಲಿ ಇನ್ನಿಬ್ಬರು ಕೂಡ ಬಿಕ್ರಂಜೀತ್ ಸಿಂಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದರು. ಸದ್ಯ ಇದುವರೆಗೆ ಈ ಗ್ಯಾಂಗ್ ಎಷ್ಟು ಅಕ್ರಮ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಹಾಗೂ ಮಾರಾಟ ಮಾಡಲಾಗಿದೆ ಎಂಬುವುದರ ಕುರಿತ ತನಿಖೆ ಮುಂದುವರೆದಿದೆ" ಎಂದು ಎಸ್ಎಸ್ಪಿ ಅಮ್ನೀತ್ ಮಾಹಿತಿ ನೀಡಿದರು.
ಇದನ್ನೂ ಓದಿ: Heroin: ಪಂಜಾಬ್ನಲ್ಲಿ ಕೋಟ್ಯಂತರ ಮೌಲ್ಯದ 77 ಕೆಜಿ ಹೆರಾಯಿನ್ ಜಪ್ತಿ; ನಾಲ್ವರ ಬಂಧನ, 3 ಪಿಸ್ತೂಲ್ ವಶಕ್ಕೆ