ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ನ.30ರಂದು ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಜೋರಾಗಿದೆ. ಶುಕ್ರವಾರ ಬಿಜೆಪಿ ಪರವಾಗಿ ಗೃಹ ಸಚಿವ ಅಮಿತ್ ಶಾ, ಅಸ್ಸೋಂ ಸಿಎಂ ಹಿಮಂತ ಬಿಸ್ವ ಶರ್ಮಾ ಪ್ರಚಾರ ಕೈಗೊಂಡರೆ, ಕಾಂಗ್ರೆಸ್ ಪರವಾಗಿ ನಾಯಕಿ ಪ್ರಿಯಾಂಕಾ ಗಾಂಧಿ, ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಮತಬೇಟೆಗೆ ಇಳಿದಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಜನಗಾಮ ಜಿಲ್ಲೆಯ ಪಾಲಕುರ್ತಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ಒಂದು ಕುಟುಂಬ ಜನಸೇವೆ ಮಾಡಿದರೆ, ಮತ್ತೊಂದು ಕುಟುಂಬವು ಜನತೆಯ ಜಮೀನು ಕಬಳಿಸಿದೆ ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ಮತ್ತು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಜನರ ತ್ಯಾಗ ಬಲಿದಾನದಿಂದ ತೆಲಂಗಾಣ ರಾಜ್ಯ ರೂಪುಗೊಂಡಿದ್ದು, ರಾಜ್ಯ ಅಭಿವೃದ್ಧಿಯಾಗಬೇಕು ಎಂದು ಭಾವಿಸಿದ್ದೇವೆ. ಹೋರಾಟದಿಂದ ಗೆದ್ದ ತೆಲಂಗಾಣದಲ್ಲಿ ಎಲ್ಲರ ಆಶಯಗಳು ಈಡೇರಬೇಕು. ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಆಶೋತ್ತರಗಳು ಈಡೇರಿವೆಯೋ.. ಇಲ್ಲವೋ ಎಂದು ಜನ ಯೋಚಿಸಬೇಕು. ಯುವಕರು ಸಾಧಿಸಿರುವ ಈ ತೆಲಂಗಾಣದಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ?, ಈ ಹತ್ತು ವರ್ಷಗಳಲ್ಲಿ ಸರ್ಕಾರ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದೆ ಎಂದು ಪ್ರಶ್ನಿಸಿದರು.
ನಿರುದ್ಯೋಗದ ವಿಷಯದಲ್ಲಿ ತೆಲಂಗಾಣ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಸರ್ಕಾರ ನಡೆಸಿದ ಉದ್ಯೋಗ ಪರೀಕ್ಷೆಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಉದ್ಯೋಗ ಪರೀಕ್ಷೆ ಪತ್ರಿಕೆಗಳು ಸೋರಿಕೆಯಾಗಿದ್ದರಿಂದ ಯುವಕರು ಹತಾಶೆಗೊಂಡಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಂಗ್ರೆಸ್ ಗೆದ್ದರೆ ನಿರುದ್ಯೋಗಿಗಳ ಸಂಕಷ್ಟ ದೂರವಾಗಲಿದೆ. ಅಧಿಕಾರಕ್ಕೆ ಬಂದ ಮೇಲೆ ಉದ್ಯೋಗ ಕ್ಯಾಲೆಂಡರ್ ಜಾರಿಗೊಳಿಸುತ್ತೇವೆ. ಪ್ರಶ್ನೆಪತ್ರಿಕೆಗಳು ಸೋರಿಕೆಯನ್ನು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಸ್ಟೇಷನ್ ಘಾನಪುರದಲ್ಲಿ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಮತ ಪ್ರಚಾರ ಕೈಗೊಂಡು, ಕೆಸಿಆರ್ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಪ್ರಧಾನಿ ಮೋದಿ ಅವರೇ ಹೇಳಿದ್ದಾರೆ. ಕೆಸಿಆರ್ ಅವರನ್ನು ಸೋಲಿಸಿ ಶಾಶ್ವತವಾಗಿ ಫಾರ್ಮ್ ಹೌಸ್ಗೆ ಕಳುಹಿಸಿ ಎಂದು ಕರೆ ನೀಡಿದರು. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿಪಿಐ ಮತ್ತು ವೈಎಸ್‌ಆರ್‌ಟಿಪಿ ಪಕ್ಷಗಳನ್ನು ಬೆಂಬಲ ಘೋಷಿಸಿವೆ ಎಂದರು.
ಹತ್ತು ವರ್ಷ ಅಧಿಕಾರದಲ್ಲಿದ್ದರೂ ಕೊಟ್ಟ ಭರವಸೆಗಳನ್ನು ಈಡೇರಿಸದ ಕೆಸಿಆರ್ ಸರ್ಕಾರ ಬೇಕಾ?, ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿಗಳು ಜಾರಿ ಮಾಡಿದ್ದೇವೆ. ಇದನ್ನು ತಿಳಿದುಕೊಳ್ಳಲಿ ಎಂದು ಕೆಸಿಆರ್ ಹಾಗೂ ಮಗ ಕೆಟಿಆರ್ಗೆ ಸವಾಲು ಹಾಕುತ್ತಿದ್ದೇನೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಡಿಸೆಂಬರ್ 9ರಂದು ಪಕ್ಷವು ಅಧಿಕಾರ ಸ್ವೀಕರಿಸಲಿದ್ದು, ಅದೇ ದಿನ 6 ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಡಿಕೆಶಿ ಹೇಳಿದರು.
ಇದನ್ನೂ ಓದಿ: ನಾಳೆ ರಾಜಸ್ಥಾನದ 199 ಸ್ಥಾನಗಳಿಗೆ ಚುನಾವಣೆ: 1,862 ಅಭ್ಯರ್ಥಿಗಳು, 5 ಕೋಟಿಗೂ ಹೆಚ್ಚು ಮತದಾರರು