ಹೈದರಾಬಾದ್ : ICRISAT ಕ್ಯಾಂಪಸ್ನ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಯ 50ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ಮಾತನಾಡಿದರು. ಈ ವೇಳೆ ಕೇಂದ್ರ ಬಜೆಟ್ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದಿರುವ ಅವರು, ಡಿಜಿಟಲ್ ಕೃಷಿಯತ್ತ ನಮ್ಮ ಗುರಿ ಎಂದರು.
50 ವರ್ಷಗಳ ಕಾಲ ವಿವಿಧ ಬೆಳೆಗಳ ಬಗೆಗಿನ ನಿಮ್ಮ ಸಂಶೋಧನೆಗೆ ಅಭಿನಂದನೆಗಳು. ಐದು ದಶಕಗಳ ಅವಧಿಯಲ್ಲಿ ಭಾರತ ಕೃಷಿಯಲ್ಲಿ ಸಮೃದ್ಧಿ ಸಾಧಿಸಿದ್ದು, ಮುಂದಿನ 50 ವರ್ಷಗಳಲ್ಲಿ ಹೆಚ್ಚಿನ ಸಂಶೋಧನೆ ಹೊರಬರಲಿ ಎಂದು ನಾನು ಬಯಸುತ್ತೇನೆ. ಕಡಿಮೆ ನೀರಿನಿಂದ ಹೆಚ್ಚಿನ ಬೆಳೆ ಬೆಳೆಯಬೇಕು. ICRISAT ಸಂಶೋಧನೆಗಳು ಜಗತ್ತಿಗೆ ಹೊಸ ಮಾರ್ಗ ತೋರಿಸಲಿ ಎಂದು ನಾನು ಭಾವಿಸುತ್ತೇನೆ ಎಂದರು.
2022-23ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ನಾವು ಸಾವಯವ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಕೃಷಿಯಲ್ಲಿ ಹೆಚ್ಚಿನ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದ್ದು, ಇದೀಗ ಡಿಜಿಟಲ್ ಕೃಷಿಯತ್ತ ಗುರಿ ಹೊಂದಿದ್ದೇವೆ. ಕೃಷಿಯಲ್ಲಿ ಡ್ರೋನ್ ಬಳಕೆಗೆ ಈಗಾಗಲೇ ಹಣ ಮಂಜೂರು ಮಾಡಲಾಗಿದ್ದು, ಸಾಗುವಳಿ ಭೂಮಿ ಡಿಜಿಟಲೀಕರಣಗೊಳ್ಳುತ್ತಿದೆ.
ಇದನ್ನೂ ಓದಿರಿ: ಎಂಟು ತಿಂಗಳ ಮಗುವಿನ ಮೇಲೆ ಹಲ್ಲೆ ನಡೆಸಿದ ದಾದಿ.. ಮಿದುಳಿನ ರಕ್ತಸ್ರಾವದಿಂದ ICUಗೆ ಕಂದಮ್ಮ ದಾಖಲು!
ಹವಾಮಾನ ವೈಪರೀತ್ಯಗಳ ನಡುವೆ ಕೂಡ ರೈತರು ಇಳುವರಿ ಸಾಧಿಸುತ್ತಿದ್ದು, ದೇಶದ 170 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಕೃಷಿ ಕ್ಷೇತ್ರಗಳಲ್ಲಿ ಇದೀಗ ಆಧುನಿಕ ವಿಧಾನ ಪರಿಚಯ ಮಾಡಲಾಗುತ್ತದೆ ಎಂದಿದ್ದಾರೆ. ಡಿಜಿಟಲ್ ಕೃಷಿಯಿಂದ ಸಾಕಷ್ಟು ಬದಲಾವಣೆಗಳಾಗಿವೆ ಎಂದರು. ರೈತರು ಸಾವಯವ ಕೃಷಿಯತ್ತ ಗಮನ ಹರಿಸಬೇಕು ಎಂದಿರುವ ನಮೋ, ಭಾರತದಲ್ಲಿ ತಾಳೆ ಎಣ್ಣೆ ಉತ್ಪಾದನೆ ಅಭಿವೃದ್ಧಿಯಾಗಬೇಕಿದೆ. ಪಾಮ್ ಆಯಿಲ್ ಕೃಷಿಯಿಂದ ತೆಲಂಗಾಣ ಹೆಚ್ಚಿನ ಲಾಭ ಗಳಿಸಿದೆ ಎಂದರು.
ICRISAT ಸುವರ್ಣ ಮಹೋತ್ಸವ ಆಚರಣೆಯಲ್ಲಿದ್ದು, ಈ 2070ರ ವೇಳೆಗೆ ಕೃಷಿಯಲ್ಲಿ ಮಹತ್ವದ ಸಾಧನೆ ಸಾಧಿಸಲಿದ್ದೇವೆ ಎಂಬ ಭರವಸೆ ಹೊಂದಿದ್ದೇವೆ ಎಂದರು. ಅದಕ್ಕಾಗಿ ಅಂತಾರಾಷ್ಟ್ರೀಯ ಬೆಳೆ ಸಂಶೋಧನೆ ಸಂಸ್ಥೆ ಹೆಚ್ಚಿನ ಸಂಶೋಧನೆಯಲ್ಲಿ ಭಾಗಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.