ಲಖನ್‌ಪುರ(ಜಮ್ಮು ಮತ್ತು ಕಾಶ್ಮೀರ): "ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿರುವುದು ನನಗೆ ಸಂತೋಷ ತಂದಿದೆ. ಆದರೆ, ದುರಾದೃಷ್ಟವಶಾತ್ ನನ್ನನ್ನು ಆಹ್ವಾನಿಸಿಲ್ಲ" ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ.ಫಾರೂಕ್ ಅಬ್ದುಲ್ಲಾ ಬೇಸರ ಹೊರಹಾಕಿದರು. ಲಖನ್‌ಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಘಾಟನೆಗೆ ಆಹ್ವಾನಿಸದಿದ್ದರೂ ಶ್ರೀರಾಮ ಬಿಜೆಪಿಗೆ ಮಾತ್ರವಲ್ಲ, ಎಲ್ಲರಿಗೂ ಸೇರಿದವನು ಎಂದರು.
ಆಹ್ವಾನ ನೀಡಿದರೆ ತೆರಳುವಿರಾ ಎಂಬ ಪ್ರಶ್ನೆಗೆ, "ರಾಮ ಮಂದಿರದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದರೆ ನಾನೇಕೆ ಹೋಗುವುದಿಲ್ಲ?. ಆದರೆ, ನನ್ನನ್ನು ಆಹ್ವಾನಿಸದಿದ್ದಕ್ಕಾಗಿ ವಿಷಾದಿಸುತ್ತೇನೆ" ಎಂದು ಹೇಳಿದರು. ಮಾತು ಮುಂದುವರೆಸಿದ ಮಾಜಿ ಸಿಎಂ, "ರಾಮ ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ, ಎಲ್ಲರಿಗೂ ಸೇರಿದವನು" ಎಂದು ಹೇಳಿದರು.
ರಾಜಧಾನಿ ದೆಹಲಿಯಿಂದ ಜಮ್ಮುವಿಗೆ ಬರುವಾಗ ಕಥುವಾ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಅನೌಪಚಾರಿಕ ಸಂವಾದದಲ್ಲಿ ಈ ವಿಷಯವನ್ನು ಅವರು ವ್ಯಕ್ತಪಡಿಸಿದರು. ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಮಾನತುಗೊಂಡ ಸಂಸದರ ಪ್ರಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಮಾತನಾಡಿದರು.
"ಕಾಶ್ಮೀರದ ಶಾಂತಿ, ಸುವ್ಯವಸ್ಥೆ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಪಡಿಸಿತು. ಆದರೆ, ರದ್ದತಿ ಬಳಿಕವೂ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆ ಕಂಡುಬಂದಿಲ್ಲ" ಎಂದು ಪೂಂಚ್ ಜಿಲ್ಲೆಯಲ್ಲಿ ಗುರುವಾರ ನಡೆದ ಭಯೋತ್ಪಾದನಾ ದಾಳಿಯನ್ನು ಅವರು ಪ್ರಸ್ತಾಪಿಸಿದರು.
"ಅಭಿವೃದ್ಧಿ ನಡೆಯುತ್ತಿದೆ, ಶಾಪಿಂಗ್ ಮಾಲ್ ಉದ್ಘಾಟನೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಕೇವಲ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಮಾತನಾಡುತ್ತಿದ್ದಾರೆ. ಒಬ್ಬ ಪ್ರವಾಸಿಗರ ಮೇಲೆ ಗುಂಡು ಹಾರಿಸಿದರೆ ಯಾರೂ ಕೂಡಾ ಇಲ್ಲಿಗೆ ಬರುವುದಿಲ್ಲ. ಶಾಪಿಂಗ್ ಮಾಲ್ ಉದ್ಘಾಟನೆಯಾಗುವುದೊಂದು ಅಭಿವೃದ್ಧಿಯೇ ಎಂದು ಪ್ರಶ್ನಿಸಿದ ಫಾರೂಕ್ ಅಬ್ದುಲ್ಲಾ, 370ನೇ ವಿಧಿ ರದ್ದತಿಗೂ ಮೊದಲೇ ಇಲ್ಲಿ ಶಾಪಿಂಗ್ ಮಾಲ್‌ಗಳಿದ್ದವು" ಎಂದು ಕಿಡಿ ಕಾರಿದರು.
"ಭಯೋತ್ಪಾದನೆ ಕೊನೆಗೊಂಡಿಲ್ಲ. ನಿರಂತರವಾಗಿ ನಡೆಯುತ್ತಲೇ ಇದೆ. ಶಾಂತಿ ಮತ್ತು ಅಭಿವೃದ್ಧಿ ಕಾಣುತ್ತಿದೆ ಎಂದು ಹೇಳುತ್ತಿರುವಾಗ ಉಗ್ರರು ಸೈನಿಕರನ್ನು ಪದೇ ಪದೇ ಹೇಗೆ ಕೊಲ್ಲುತ್ತಿದ್ದಾರೆ" ಅವರು ಪ್ರಶ್ನಿಸಿದರು. ಪೂಂಚ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಸೇನಾ ವಾಹನಗಳ ಮೇಲೆ ದಾಳಿಯನ್ನು ಅವರು ಇದೇ ವೇಳೆ ಖಂಡಿಸಿದರು.
ಇದನ್ನೂ ಓದಿ: ಜಮ್ಮು ಕಾಶ್ಮೀರ: ಪೂಂಚ್‌ನಲ್ಲಿ ಉಗ್ರರ ದಾಳಿ, ಮೂವರು ಸೈನಿಕರು ಹುತಾತ್ಮ