ಹುಬ್ಬಳ್ಳಿ: ದರ್ಗಾದಲ್ಲಿ ಹಿಂದೂ ಮಹಿಳೆಯೊಬ್ಬರು ಪೂಜೆ ಹಾಗೂ ಮೇಲುಸ್ತುವಾರಿ ನೋಡಿಕೊಳ್ಳುವ ಮೂಲಕ ಭಾವೈಕ್ಯತೆಯ ಸಂಕೇತವಾಗಿದ್ದಾರೆ. ದರ್ಗಾದಲ್ಲಿ ಪೂಜೆ ಮಾಡುತ್ತಿರುವ ಹಿಂದೂ ಮಹಿಳೆಯ ಹೆಸರು ಹನಮವ್ವ ಗುಡಗುಂಟಿ. ಇವರು ಹುಬ್ಬಳ್ಳಿ ಕೇಶ್ವಾಪೂರದ ನಿವಾಸಿಯಾಗಿದ್ದು, ರಾಮನಗರ ದೂದಪಿರಾ ದರ್ಗಾದಲ್ಲಿ ಕಳೆದ 62 ವರ್ಷಗಳಿಂದ ಗುಡಗುಂಟಿ ಮನೆತನದವರು ಪೂಜೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಮುಸ್ಲಿಂ ಸಮುದಾಯದವರು ಕೂಡ ಇವರಿಗೆ ಅಷ್ಟೇ ಸಹಕಾರ ನೀಡುತ್ತಾ ಬಂದಿದ್ದಾರೆ.
ಮುಸ್ಲಿಂ ಸಮಾಜದವರು ಬಂದು ಇಲ್ಲಿ ನಮಾಜ್ ಮಾಡಿ ಹೋಗುತ್ತಾರೆ. ಇಲ್ಲಿಯವರೆಗೂ ಯಾವುದೇ ಅಡ್ಡಿ ಆತಂಕವಿಲ್ಲದೆ ಪೂಜೆ ನಡೆಯುತ್ತದೆ. ಪೂರ್ವಜರು ನಡೆಸಿಕೊಂಡು ಬಂದಂತೆ ನಾವು ನಮ್ಮ ತಂದೆ, ತಾಯಿಯ ನಿಧನದ ನಂತರ ಮುಂದುವರೆಸಿಕೊಂಡು ಬರ್ತಿದ್ದೇವೆ ಎನ್ನುತ್ತಾರೆ ಹನುಮವ್ವ.
ಇದನ್ನೂ ಓದಿ: ರಂಜಾನ್, ಬಸವ ಜಯಂತಿ ಆಚರಣೆ: ಚಾಮರಾಜನಗರದಲ್ಲಿ ಸಾಮರಸ್ಯ ಸಾರಿದ ಜನರು
ದರ್ಗಾದಲ್ಲಿ ಒಂದೆಡೆ ಹಿಂದೂಗಳು ಪೂಜೆ ಮಾಡಿದರೆ, ಮತ್ತೊಂದೆಡೆ ಮುಸ್ಲಿಮರು ನಮಾಜ್ ಮಾಡುತ್ತಾರೆ. ಹೀಗೆ ಎಲ್ಲ ಧರ್ಮದವರು ಭಾವೈಕ್ಯತೆಯಿಂದ ಸಾಮರಸ್ಯದಿಂದ ನಡೆದುಕೊಂಡು ಬರುತ್ತಿದ್ದಾರೆ. ಅಲ್ಲದೆ ಪ್ರತಿ ವರ್ಷ ಸಂದಲ್ ಮತ್ತು ಉರುಸನ್ನು ಭಾವೈಕ್ಯತೆಯಿಂದ ಹಿಂದೂ-ಮುಸ್ಲಿಮರು ಸೇರಿ ಆಚರಿಸುತ್ತಾರೆ.