ನವ ದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದರೊಂದಿಗೆ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಾಜೀವ ಶುಕ್ಲಾ ಅವರಿಗೆ ಪಕ್ಷದಲ್ಲಿ ಒಂದಿಷ್ಟು ಮುನ್ನಡೆ ಲಭಿಸಿದಂತಾಗಿದೆ. 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 403 ಸ್ಥಾನಗಳ ಪೈಕಿ 2 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಅದಕ್ಕೆ ಹೋಲಿಸಿದರೆ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದ ಪ್ರಿಯಾಂಕಾಗೆ ಹಿಮಾಚಲ ಪ್ರದೇಶದ ಗೆಲುವು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಪ್ರಚಾರದ ಸಮಯದಲ್ಲಿ ಪ್ರಿಯಾಂಕಾ ಪ್ರಮುಖ ಸ್ಥಳಗಳಲ್ಲಿ ಹಲವಾರು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು ಮತ್ತು ಪಕ್ಷಕ್ಕಾಗಿ ನವೆಂಬರ್ 10 ರಂದು ಪ್ರಚಾರದ ಕೊನೆಯ ದಿನದಂದು ರಾಜಧಾನಿ ಶಿಮ್ಲಾದಲ್ಲಿ ರೋಡ್‌ಶೋ ನಡೆಸಿದ್ದರು. 1971 ರಲ್ಲಿ ಇಂದಿರಾ ಗಾಂಧಿ ಹಿಮಾಚಲ ಪ್ರದೇಶವನ್ನು ರಚಿಸಿದ್ದರು ಮತ್ತು ನಂತರ ಆ ಪ್ರದೇಶದಲ್ಲಿ ಭಾರಿ ಪ್ರಮಾಣದ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದರು. ಸಂಪೂರ್ಣ ಪ್ರಚಾರದ ಸಮಯದಲ್ಲಿ ಪ್ರಿಯಾಂಕಾ ತನ್ನ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾರ್ಯಗಳನ್ನು ಜನರಿಗೆ ನೆನಪಿಸಿದ್ದರು.
ಕಳೆದ ಐದು ವರ್ಷಗಳಿಂದ ಹಿಮಾಚಲ ಪ್ರದೇಶವನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಪ್ರಿಯಾಂಕಾ, ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರಬೇಕು ಎಂದು ಮತದಾರರಿಗೆ ಮನವಿ ಮಾಡಿದ್ದರು. ಈಗ ಕಾಂಗ್ರೆಸ್ ನಿಂದ ತಾವು ನೀಡಿದ ಭರವಸೆಗಳನ್ನು ಈಡೇರಿಸಬಲ್ಲ ಒಳ್ಳೆಯ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ. ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ಅವರಿಗೆ ಕೂಡ ಹಿಮಾಚಲ ಫಲಿತಾಂಶ ಮಹತ್ವದ್ದಾಗಿದೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ತನ್ನ ಹೊಸದಾಗಿ ಚುನಾಯಿತ ಶಾಸಕರನ್ನು ಚಂಡೀಗಢಕ್ಕೆ ಸ್ಥಳಾಂತರಿಸುತ್ತಿದೆ, ಅಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಡಿ.9 ರಂದು CLP ಸಭೆ ನಡೆಯುವ ಸಾಧ್ಯತೆಯಿದೆ. ಶುಕ್ಲಾ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಹರಿಯಾಣ ಸಿಎಲ್‌ಪಿ ನಾಯಕ ಭೂಪಿಂದರ್ ಹೂಡಾ ಅವರು ಸಿಎಲ್‌ಪಿ ಸಭೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮೋದಿ ಹೆಸರು, ಬಿಜೆಪಿ-ಆಪ್ ಪ್ರಚಾರ ಭರಾಟೆಯ ಮಧ್ಯೆ ಕಂಗೆಟ್ಟು ಕುಸಿದ ಕಾಂಗ್ರೆಸ್!