ಹೈದರಾಬಾದ್ (ತೆಲಂಗಾಣ): ಬೇಸಿಗೆ ಆರಂಭವಾಗಿದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುವ ಅಗತ್ಯವಿದೆ. ಚಳಿಗಾಲದಲ್ಲಿ ಒಂದು ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡಿದರೆ, ಬೇಸಿಗೆಯಲ್ಲಿ ಬೇರೊಂದು ರೀತಿಯ ಆರೋಗ್ಯ ತೊಂದರೆಗಳು ಬಾಧಿಸುತ್ತವೆ. ತೆಲಂಗಾಣ ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಗರಿಷ್ಠ ತಾಪಮಾನ ದಾಖಲಾಗುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವು ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಎರಡು ಡಿಗ್ರಿಗಳಷ್ಟು ಹೆಚ್ಚಾಗುತ್ತದೆ. ಈಗಾಗಲೇ ವಿವಿಧ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಗುರುವಾರ ಕಾಮರೆಡ್ಡಿ ಜಿಲ್ಲೆಯ ಭಿಕ್ಕನೂರ್ ಮಂಡಲದಲ್ಲಿ ರಾಜ್ಯದ ಅತಿ ಹೆಚ್ಚು ತಾಪಮಾನ 43.8 ಡಿಗ್ರಿ ದಾಖಲಾಗಿದೆ. ರಾಜಣ್ಣ-ಸಿರಿಸಿಲ್ಲ, ನಿಜಾಮಾಬಾದ್, ಸಿದ್ದಿಪೇಟೆ, ನಲ್ಗೊಂಡ, ಜಗಿತ್ಯಾಲ, ಆದಿಲಾಬಾದ್, ಮಹಬೂಬನಗರ, ಜೋಗುಲಾಂಬ-ಗದ್ವಾಲ, ವಿಕಾರಾಬಾದ್, ಯಾದಾದ್ರಿ-ಭುವನಗಿರಿ, ಕುಮುರಭೀಮ್-ಆಸಿಫಾಬಾದ್, ಜನಗಾಂ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ 40 ಡಿಗ್ರಿಗಿಂತ ಹೆಚ್ಚಿನ ತಾಪಮಾನವಿತ್ತು.
ಆರೆಂಜ್, ಯೆಲ್ಲೋ ಅಲರ್ಟ್: ಶುಕ್ರವಾರದಿಂದ ಏಪ್ರಿಲ್ 3ರವರೆಗೆ ಏಳು ಜಿಲ್ಲೆಗಳಲ್ಲಿ ಜನರು ಎಚ್ಚರದಿಂದಿರಬೇಕು ಎಂದು ಇಲಾಖೆ ಹೇಳಿದೆ. ಆದಿಲಾಬಾದ್, ಕುಮುರಭೀಮ್-ಆಸಿಫಾಬಾದ್, ಮಂಚಿರ್ಯಾಲ, ನಾರಾಯಣಪೇಟೆ, ವನಪರ್ತಿ, ಜೋಗುಲಾಂಬ-ಗದ್ವಾಲ ಮತ್ತು ನಾಗರಕರ್ನೂಲ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಜಿಲ್ಲೆಗಳಲ್ಲಿ ಹವಾಮಾನದ ಮೇಲೆ ನಿಗಾ ಇಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ತಾಪಮಾನ ಏರಿಕೆ: ಆರೋಗ್ಯ ಸೌಲಭ್ಯ ಹೆಚ್ಚಿಸಲು ಅಗತ್ಯ ಕ್ರಮವಹಿಸುವಂತೆ ಕೇಂದ್ರದ ಸೂಚನೆ
ಯಾವ ಬಣ್ಣ? ಏನು ಎಚ್ಚರಿಕೆ?: ತಾಪಮಾನ 35.9 ಡಿಗ್ರಿ ದಾಟಿದರೆ ಹವಾಮಾನ ಇಲಾಖೆ ಮೂರು ರೀತಿಯ ಎಚ್ಚರಿಕೆಗಳನ್ನು ನೀಡುತ್ತದೆ. ಜನರು ಮತ್ತು ಅಧಿಕಾರಿಗಳು ಎಚ್ಚರವಾಗಿರಲು ಮಾಧ್ಯಮಗಳ ಮೂಲಕ ಈ ಸೂಚನೆಗಳಿಗೆ ಪ್ರಚಾರ ನೀಡುತ್ತದೆ. ನಗರ, ಪಟ್ಟಣಗಳಲ್ಲಿ ಡಿಜಿಟಲ್ ಬೋರ್ಡ್‌ಗಳಲ್ಲಿಯೂ ಪ್ರದರ್ಶಿಸಲಾಗುತ್ತದೆ. 36-40 ಡಿಗ್ರಿ ಯೆಲ್ಲೋ ಅಲರ್ಟ್ (ಮೇಲ್ವಿಚಾರಣೆ), 41-45 ಡಿಗ್ರಿ ಆರೆಂಜ್ ಅಲರ್ಟ್ (ಅಸುರಕ್ಷಿತ) ಮತ್ತು 45 ಡಿಗ್ರಿಗಿಂತ ಹೆಚ್ಚಿನ ತಾಪಮಾನಕ್ಕೆ ರೆಡ್ ಅಲರ್ಟ್ (ಎಚ್ಚರಿಕೆ) ಎಂದು ಹೇಳಲಾಗುತ್ತದೆ. ಪ್ರಸ್ತುತ ತೆಲಂಗಾಣ ರಾಜ್ಯವು ಆರೆಂಜ್ ಬಣ್ಣದ ಎಚ್ಚರಿಕೆ ಮಟ್ಟದ ತಾಪಮಾನ ದಾಖಲಿಸುತ್ತಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಏಪ್ರಿಲ್ನ ಮೊದಲನೇ ವಾರದಿಂದ ಜೂನ್‌ವರೆಗೂ ಹೆಚ್ಚು ತಾಪ ದಾಖಲಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ. ಹೊರಾಂಗಣದಲ್ಲಿ ಕೆಲಸ ಮಾಡುವವರು ಮತ್ತು ಪ್ರಯಾಣ ಮಾಡುವವರು ತಾಪಮಾನದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಮಧ್ಯಾಹ್ನದ ವೇಳೆ ತಂಪು ಅಥವಾ ನೆರಳಿನ ವಾತಾವರಣ ಅನುಸರಿಸುವುದು ಉತ್ತಮ.
ಇದನ್ನೂ ಓದಿ: ಬ್ರಿಟನ್ನಲ್ಲಿ ದಾಖಲೆ ಮಟ್ಟಕ್ಕೇರಿದ ಉಷ್ಣಾಂಶ; ನೀರಲ್ಲಿ ಮುಳುಗಿ ಸತ್ತ ಜನ