ನವದೆಹಲಿ : ಜನವರಿ 13 ರೊಳಗೆ ಕೋವಿಡ್ ಲಸಿಕೆ ವಿತರಣೆ ಪ್ರಾರಂಭಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ದತೆ ನಡೆಸಿದ್ದು, ಲಸಿಕೆ ವಿತರಣೆ ಪ್ರಾರಂಭಿಸುವ ಅಂತಿಮ ದಿನಾಂಕ ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಲಸಿಕೆ ವಿತರಣೆಗಾಗಿ ಡಾಟಾಬೇಸ್ ಮ್ಯಾನೇಜ್ಮೆಂಟ್ ನಿರ್ವಹಣಾ ವ್ಯವಸ್ಥೆ ಕೋ-ವಿನ್ ಬಳಸಲು ಸರ್ಕಾರ ನಿರ್ಧರಿಸಿದೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕೋ-ವಿನ್ನಲ್ಲಿ ಲಸಿಕೆ ಪಡೆದವರಿಗೆ ವಿಶಿಷ್ಟ ಆರೋಗ್ಯ ಐಡಿ ರಚಿಸಲಾಗುತ್ತದೆ ಎರಡೂ ಡೋಸ್ ಲಸಿಕೆ ನೀಡಿದ ಬಳಿಕ, ಕ್ಯೂಆರ್ ಕೋಡ್ ಪ್ರಮಾಣ ಪತ್ರ ಕ್ರಿಯೇಟ್ ಆಗಲಿದೆ. ಅದನ್ನು ಸರ್ಕಾರದ ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲಾಗುತ್ತದೆ.
ಓದಿ : ಇಂದು ಅಥವಾ ನಾಳೆಯಿಂದ ಕೋವಿಡ್ ಲಸಿಕೆ ಸಾಗಾಟ ಆರಂಭ
ಲಸಿಕೆ ಪಡೆದ ಬಳಿಕ ಯಾವುದೇ ವ್ಯತಿರಿಕ್ತ ಪರಿಣಾಮಗಳು ಬೀರಿದಲ್ಲಿ, ಸರಿಯಾದ ಸಮಯಕ್ಕೆ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದಂತೆ 12 ಭಾಷೆಗಳಲ್ಲಿ ಎಸ್ಎಂಎಸ್, 24X7 ಸಹಾಯವಾಣಿ, ಚಾಟಿಂಗ್ ವ್ಯವಸ್ಥೆಯನ್ನು ಕೋ-ವಿನ್ ಒಳಗೊಂಡಿರುತ್ತದೆ. ಸದ್ಯದ ಮಾಹಿತಿ ಪ್ರಕಾರ, ದೇಶದ 700 ಕ್ಕೂ ಅಧಿಕ ಜಿಲ್ಲೆಗಳಲ್ಲಿ 90 ಸಾವಿರಕ್ಕೂ ಹೆಚ್ಚು ಬಳಕೆದಾರರಿಗೆ ತರಬೇತಿ ನೀಡಲಾಗಿದೆ.