ನವದೆಹಲಿ: ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳು ವಾರಕ್ಕೆ ಸುಮಾರು ಶೇ 43 ರಷ್ಟು ಹೆಚ್ಚಳವಾಗುತ್ತಿವೆ. ಸಾವಿನ ಪ್ರಮಾಣ ವಾರದಲ್ಲಿ ಸುಮಾರು ಶೇ 37ರಷ್ಟು ಜಾಸ್ತಿಯಾಗಿದೆ. ದೇಶದ ಎಲ್ಲಾ ಸಕ್ರಿಯ ಪ್ರಕರಣಗಳ ಪೈಕಿ ಶೇ 60ರಷ್ಟು ಮಹಾರಾಷ್ಟ್ರ ಕೇಂದ್ರೀಕೃತವಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದರು.
![Health ministry press conference](https://etvbharatimages.akamaized.net/etvbharat/prod-images/11046395_eeee-2.jpg)
ಪರೀಕ್ಷೆ ಹೆಚ್ಚಿಸಲು ಕರ್ನಾಟಕಕ್ಕೆ ಸಲಹೆ:
ದೇಶದಲ್ಲಿ ಕೊರೊನಾ ಕುರಿತು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಸಚಿವಾಲಯ, ಪಂಜಾಬ್‌ನ ಕೊರೊನಾ ಪಾಸಿಟಿವ್ ಪ್ರಕರಣಗಳ ದರವು ಈಗ 6.8% ಆಗಿದೆ. ಇದು ಚಿಂತಾಜನಕವಾಗಿದೆ. ಸರಿಯಾದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂಬುದನ್ನು ಇದು ತೋರಿಸುತ್ತದೆ.
ಕೆಲವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಕೊರೊನಾ ಸೋಂಕಿನ ಉಲ್ಬಣವನ್ನು ಕಂಡಾಗಲೂ ಮರಣ ಪ್ರಮಾಣವು 2% ಕ್ಕಿಂತ ಕಡಿಮೆಯಿದೆ. ಕರ್ನಾಟಕದ ಕೊರೊನಾ ಪ್ರಕರಣಗಳ ಪ್ರಮಾಣ ಶೇ 1.3 ಇದೆ. ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕೆಂದು ನಾವು ಕರ್ನಾಟಕಕ್ಕೆ ಸಲಹೆ ನೀಡುತ್ತೇವೆ ಎಂದು ಹೇಳಿದರು.
16 ರಾಜ್ಯಗಳ ಕೋವಿಡ್-19 ಪ್ರಕರಣಗಳು ಶೇ150 ಹೆಚ್ಚಳ:
ಇಲ್ಲಿಯವರೆಗೆ, ಒಟ್ಟು 3.51 ಕೋಟಿ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 400 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇಲ್ಲಿ ಕೊರೊನಾ ಸೋಂಕಿನ ಪ್ರಮಾಣವು ಶೇ 1ಕ್ಕಿಂತ ಕಡಿಮೆಯಿದೆ. ಆದಾಗ್ಯೂ, ಇದು ಶೇ 0.4 ರಿಂದಶೇ 0.6ಕ್ಕೆ ಏರಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದರು.
ಇದನ್ನೂ ಓದಿ: ಟೆಸ್ಟಿಂಗ್ ಹೆಚ್ಚಿಸಿ, ಜನರು ಆತಂಕಗೊಳ್ಳದಂತೆ ತಕ್ಷಣ ಕ್ರಮ ಕೈಗೊಳ್ಳಿ: ಸಿಎಂಗಳಿಗೆ ಮೋದಿ ಮಹತ್ವದ ಸೂಚನೆ
ಕಳೆದ 15 ದಿನಗಳಲ್ಲಿ 16 ರಾಜ್ಯಗಳ 70 ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳು ಶೇ 150ರಷ್ಟು ಹೆಚ್ಚಾಗಿದೆ. ಹಲವೆಡೆ ಕೊರೊನಾ ಲಸಿಕೆಗಳ ಬಳಕೆ ಕಡಿಮೆಯಿದೆ. ಎಲ್ಲರೂ ಲಸಿಕೆ ಪಡೆಯಬೇಕು. ಅಲ್ಲದೇ ಸರಿಯಾದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದರಿಂದ ಸೋಂಕು ಹರಡುವುದನ್ನು ತಡೆಯಬಹುದು. ಕ್ಲೋಸ್ ಕಾಂಟ್ಯಾಕ್ಟ್ ಎಂದರೆ ಕೇವಲ ನಮ್ಮ ಕುಟುಂಬದವರು ಮಾತ್ರವಲ್ಲ. ನಮ್ಮ ಅಕ್ಕ-ಪಕ್ಕದವರು ಸಹ ಬರುತ್ತಾರೆ. ಯಾರಿಂದಲಾದರೂ ನಮಗೆ ಕೊರೊನಾ ಹರಡಬಹುದು ಅಥವಾ ನಮ್ಮಿಂದ ಅವರಿಗೆ ಕೊರೊನಾ ಹರಡುತ್ತದೆ ಎಂದಾದಲ್ಲಿ ಅವರು ಕ್ಲೋಸ್ ಕಾಂಟ್ಯಾಕ್ಟ್ ಎಂದೇ ಅರ್ಥ. ಆದ್ದರಿಂದ ಎಲ್ಲರೂ ಕೊರೊನಾ ವಿರುದ್ಧ ಹೋರಾಡಲು ಸರಿಯಾಗಿ ನಿಯಮಗಳ ಪಾಲನೆ ಮಾಡಿ ಎಂದು ಅವರು ಎಚ್ಚರಿಸಿದರು.
![Health ministry press conference](https://etvbharatimages.akamaized.net/etvbharat/prod-images/11046395_eeee-1.jpg)
ಶೇ 6.5 ಕೊರೊನಾ ಲಸಿಕೆ ವ್ಯರ್ಥ:
ಭಾರತದ ಒಟ್ಟಾರೆ ಶೇಕಡಾವಾರು ಕೊರೊನಾ ಲಸಿಕೆ ವ್ಯರ್ಥ ಪ್ರಮಾಣವು ಶೇ 6.5 ಆಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕ್ರಮವಾಗಿ 17.6% ಮತ್ತು 11.6% ಲಸಿಕೆ ವ್ಯರ್ಥವಾಗಿದೆ. ಲಸಿಕೆ ವ್ಯರ್ಥವನ್ನು ತೀವ್ರವಾಗಿ ಕಡಿಮೆ ಮಾಡುವ ಅಗತ್ಯವಿದೆ ಎಂದು ನಾವು ರಾಜ್ಯಗಳಿಗೆ ತಿಳಿಸಿದ್ದೇವೆ. ಹೆಚ್ಚಿನದನ್ನು ರಾಜ್ಯಗಳು ಸಮರ್ಥವಾಗಿ ಮಾಡಬೇಕೆಂದು ನಾವು ವಿನಂತಿಸಿದ್ದೇವೆ. ಅದೇ ರೀತಿ ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ಚಿಕಿತ್ಸೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದು ಆರೋಗ್ಯ ಕಾರ್ಯದರ್ಶಿ ತಿಳಿಸಿದರು.
![Health ministry press conference](https://etvbharatimages.akamaized.net/etvbharat/prod-images/11046395_784_11046395_1615980841556.png)
ದವಾಯಿ ಭಿ ಕಡಾಯಿ ಭಿ:
ಈ ಮಂತ್ರ ಈಗ ತುಂಬ ಮುಖ್ಯವಾಗುತ್ತದೆ. ಕೇವಲ ಲಸಿಕೆ ಮಾತ್ರ ನಮಗೆ ಕೊರೊನಾದಿಂದ ದೂರವಿಡಲು ಸಾಧ್ಯವಿಲ್ಲ. ಲಸಿಕೆ ನಮ್ಮ ಬಳಿಯಿರುವ ಅನೇಕ ಅಸ್ತ್ರಗಳಲ್ಲೊಂದು. ಆದರೆ ನಾವು ಎಲ್ಲ ಕೊರೊನಾ ನಿಯಮಗಳನ್ನು ಪಾಲಿಸಿ, ಲಸಿಕೆಯನ್ನು ಪಡೆದು ಕೊರೊನಾ ವಿರುದ್ಧ ಹೋರಾಡಬೇಕು. ಸಾಮಾಜಿಕ ಅಂತರ, ಮಾಸ್ಕ್ ಬಳಸುವ ಜತೆ ನಾವು ನಮ್ಮ ಜತೆ ಸಮಾಜವನ್ನೂ ಕೊರೊನಾದಿಂದ ಉಳಿಸಬೇಕಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪೌಲ್ ಹೇಳಿದರು.
ಇದನ್ನೂ ಓದಿ: 'ಕಳಪೆ ಲಸಿಕೆ' ನಿರ್ವಹಣೆ, ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಉಲ್ಬಣ: ಜಾವಡೇಕರ್ ಕಿಡಿ
ಇಂದಿನ ಅತ್ಯಂತ ಮಹತ್ವದ ಬೆಳವಣಿಗೆಯೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆ ಕೋವಿಡ್ ಪರಿಸ್ಥಿತಿ ಮತ್ತು ಲಸಿಕೆ ಕುರಿತು ವಿವರವಾದ ಚರ್ಚೆ ನಡೆಸಿದರು. ಲಸಿಕೆ ವ್ಯರ್ಥವಾಗುವುದರ ಬಗ್ಗೆ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದರು. ಇದು ಅಮೂಲ್ಯ ಸರಕು. ಅದು ವ್ಯರ್ಥವಾಗಬಾರದು. ಎಲ್ಲಾ ಸಿಎಂಗಳೊಂದಿಗಿನ ಸಭೆಯಲ್ಲಿ ಪ್ರಧಾನಿ ಅವರು ಶ್ರೇಣಿ 2 ಮತ್ತು 3 ನಗರಗಳಲ್ಲಿ ಪರೀಕ್ಷೆ, ಕ್ಲಿನಿಕಲ್ ಕೇರ್ ಸೌಲಭ್ಯಗಳನ್ನು ಬಲಪಡಿಸುವ ಅಗತ್ಯವಿದೆ ಅಂತ ತಿಳಿಸಿದ್ದಾರೆ ಎಂದು ಅವರು ಹೇಳಿದರು.