ರೇವಾರಿ (ಹರಿಯಾಣ): ಎರಡು ವರ್ಷಗಳ ಹಿಂದೆ ಎಂಟು ಸಾವಿರ ರೂಪಾಯಿ ಮೌಲ್ಯದ ನಾಲ್ಕು ಜೋಡಿ ಶೂಗಳನ್ನು ದೋಚಿದ್ದ ಆರೋಪ ಪ್ರಕರಣದಲ್ಲಿ ಇಬ್ಬರು ಕಳ್ಳರಿಗೆ ಹರಿಯಾಣದ ರೇವಾರಿ ಜಿಲ್ಲಾ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ, ಇಬ್ಬರೂ ಅಪರಾಧಿಗಳಿಗೆ 41 ಸಾವಿರ ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿ ಆದೇಶಿಸಿದೆ.
ಅಪರಾಧಿಗಳಾದ ದೀಪಕ್ ಅಲಿಯಾಸ್ ದೀಪು (ಬಲ್ಲು ಅಲಿಯಾಸ್ ಬಲ್ವಾನ್) ಎಂಬಾತನಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 21,000 ರೂಪಾಯಿ ದಂಡ ಹಾಗೂ ಎರಡನೇ ಅಪರಾಧಿ ಕಾಳಿ ಅಲಿಯಾಸ್ ಕಾಲಿಯಾ ಎಂಬಾತನಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಈ ದಂಡವನ್ನು ಪಾವತಿಸದಿದ್ದಲ್ಲಿ ಅಪರಾಧಿಗಳು ಆರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣದ ವಿವರ.. 2021ರ ಸೆಪ್ಟೆಂಬರ್12ರಂದು ನಗರದ ಮೋತಿ ಚೌಕ್‌ನ ನಿವಾಸಿ ಅಶೋಕ್ ಕುಮಾರ್ ಎಂಬಾತ ತನ್ನ ಅಂಗಡಿ ಶ್ಯಾಮ್ ಗಾರ್ಮೆಂಟ್ಸ್‌ನಲ್ಲಿ ಕುಳಿತಿದ್ದಾಗ ನಾಲ್ಕು ಜೋಡಿ ಶೂಗಳನ್ನು ದೀಪಕ್ ಹಾಗೂ ಕಾಳಿ ದೋಚಿಸಿದ್ದರು. ಮೊಹಲ್ಲಾ ಬಂಜರವಾಡ ನಿವಾಸಿಗಳಾದ ಇಬ್ಬರೂ ಮೋಟಾರ್ ಸೈಕಲ್‌ನಲ್ಲಿ ಬಂದು ಗನ್ ತೋರಿಸಿ ಶೂಗಳ ಲೂಟಿ ಮಾಡಿದ್ದರು.
ನಾಲ್ಕು ಜೊತೆ ಬೆಲೆಬಾಳುವ ಶೂಗಳನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದ ದೀಪಕ್ ಹಾಗೂ ಕಾಳಿ ಇಬ್ಬರನ್ನೂ ಪೊಲೀಸರು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಬಂಧಿಸಿದ್ದರು. ನಂತರ ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಇದನ್ನೂ ಓದಿ: ಮೇಕೆ ವಿಚಾರವಾಗಿ ಜಗಳ: ವೃದ್ಧೆ ಸಾವಿಗೆ ಕಾರಣವಾಗಿದ್ದ ಆರೋಪಿತೆಯ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್
ಇದೀಗ ಪ್ರಕರಣದ ವಿಚಾರಣೆಯು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಲ್ಲಿ ಮುಗಿದಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಡಾ.ಸುಶೀಲ್ ಕುಮಾರ್ ಗರ್ಗ್ ಅವರು ಆರೋಪಿಗಳಿಬ್ಬರನ್ನೂ ದೋಷಿ ಎಂದು ಪ್ರಕಟಿಸಿದ್ದಾರೆ. ಅಲ್ಲದೇ, ಇಬ್ಬರಿಗೂ ತಲಾ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟು 41 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
ಚಿನ್ನ ದರೋಡೆ ಕೇಸ್ ಬಾಕಿ: ಮತ್ತೊಂದೆಡೆ, ಶೂಗಳನ್ನು ದೋಚಿದ ದಿನದಂದೇ ಆರೋಪಿಗಳಾದ ದೀಪಕ್ ಮತ್ತು ಕಾಳಿ ಉದ್ಯಮಿಯೊಬ್ಬರನ್ನು ದರೋಡೆ ಮಾಡಿದ್ದರು. ಪಟೌಡಿ ನಿವಾಸಿ, ಉದ್ಯಮಿ ಅಶೋಕ್ ಕುಮಾರ್ ಅವರಿಂದ ಈ ಖದೀಮರು ಚಿನ್ನದ ಬಿಸ್ಕೆಟ್ ಇರುವ ಬ್ಯಾಗ್ ಲೂಟಿ ಮಾಡಿದ್ದರು.
ದುಬಾರಿ ಶೂಗಳನ್ನು ಎತ್ತಿಕೊಂಡು ಬಂದಿದ್ದ ಈ ಕಳ್ಳರು ಬಾರಾ ಹಜಾರಿಯಲ್ಲಿರುವ ಮಾರುಕಟ್ಟೆಯಲ್ಲಿ ಉದ್ಯಮಿ ಅಶೋಕ್ ಕುಮಾರ್ ಅವರನ್ನು ಬೆನ್ನಟ್ಟಿನಲ್ಲಿ ಚಿನ್ನವನ್ನು ದೋಚಿದ್ದರು. ಈ ಚಿನ್ನ ದರೋಡೆ ಬಗ್ಗೆಯೂ ಅಂದೇ ಪೊಲೀಸರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಕೂಡ ನ್ಯಾಯಾಲಯ ನಡೆಯುತ್ತಿದ್ದು, ಇದರ ನಿರ್ಧಾರ ಆಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 42 ವರ್ಷ ಹಳೆಯ ಪ್ರಕರಣದಲ್ಲಿ 90 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ