ಭಿವಾನಿ : ಹರಿಯಾಣದ ಭಿವಾನಿ ಜಿಲ್ಲೆಯ ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಭಾನುವಾರ ಸಂಜೆ ಮತ್ತೊಬ್ಬ ಕಾರ್ಮಿಕನ ಮೃತ ದೇಹವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 8.15ರ ಸುಮಾರಿಗೆ ಗಣಿಗಾರಿಕೆ ನಡೆಯುತ್ತಿದ್ದಾಗ ಪರ್ವತದ ಬಹುಭಾಗ ಹಠಾತ್ತನೆ ಬಿರುಕು ಬಿಟ್ಟು ಕುಸಿದಿದೆ. ಘಟನೆ ವೇಳೆ ಸ್ಥಳದಲ್ಲಿ ನಿಂತಿದ್ದ ಸುಮಾರು ಅರ್ಧ ಡಜನ್ ಪಾಪ್‌ಲ್ಯಾಂಡ್ ಯಂತ್ರಗಳು ಮತ್ತು ಡಂಪರ್‌ಗಳು ಹೂತು ಹೋಗಿವೆ. ಅವಶೇಷಗಳ ಅಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಓದಿ: ಅಳವಿನಂಚಿಲ್ಲಿದ್ದ ಮೆಕ್ಸಿಕನ್ ಮೀನಿನ ಸಂತತಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ!
ಈಗಾಗಲೇ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ನಿನ್ನೆ ಸಂಜೆ ಪತ್ತೆಯಾದ ಮೃತದೇಹ ಸುಮಾರು 50 ವರ್ಷದ ವ್ಯಕ್ತಿಯದ್ದಾಗಿದೆ. ಇವರು ರೋಹ್ಟಕ್ ಸಮೀಪದ ಹಳ್ಳಿಗೆ ಸೇರಿದವರು. ಇನ್ನೂ ಅನೇಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ತೋಷಮ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಖ್ಬೀರ್ ದೂರವಾಣಿ ಮೂಲಕ ತಿಳಿಸಿದ್ದಾರೆ.
ಓದಿ:ರಾಜ್ಯದಲ್ಲಿ ಮತ್ತೆ 10 ಮಂದಿಗೆ ವಕ್ಕರಿಸಿದ ಒಮಿಕ್ರಾನ್ .. 76ಕ್ಕೆ ಏರಿದ ಸೋಂಕಿತರ ಸಂಖ್ಯೆ
ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ನಂತರ ಭಿವಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಧರಂಬಿರ್ ಸಿಂಗ್, ಹಲವು ನಿಯಮಗಳನ್ನು ಉಲ್ಲಂಘಿಸಿ ದಡಮ್ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಒತ್ತಾಯಿಸುವುದಾಗಿ ಹೇಳಿದರು.