ಥಾಣೆ (ಮಹಾರಾಷ್ಟ್ರ): ತನ್ನ ಗೆಳತಿಯ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಸರ್ಕಾರಿ ಅಧಿಕಾರಿಯ ಪುತ್ರ, ಪ್ರಮುಖ ಆರೋಪಿ ಅಶ್ವಜಿತ್ ಗಾಯಕ್‌ವಾಡ್ ಸೇರಿ ಮೂವರು ಆರೋಪಿಗಳನ್ನು ಥಾಣೆ ಪೊಲೀಸರ ಎಸ್‌ಐಟಿ ತಂಡವು ಬಂಧಿಸಿದ್ದು, ಅಪರಾಧಕ್ಕೆ ಬಳಸಿದ್ದ ವಾಹನವನ್ನೂ ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ.
ಹಿರಿಯ ಸರ್ಕಾರಿ ಅಧಿಕಾರಿಯ ಪುತ್ರ ಅಶ್ವಜಿತ್ ಗಾಯಕ್‌ವಾಡ್ ಹಾಗೂ ಸಹಚರರೊಂದಿಗೆ ತನ್ನ ಗೆಳತಿಗೆ ಮನ ಬಂದಂತೆ ಥಳಿಸಿದ ಕೊಲೆ ಯತ್ನ ಆರೋಪದ ಹಿನ್ನೆಲೆ ಪೊಲೀಸರು ಠಾಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ಓಡಿಹೋಗಲು ಯತ್ನಿಸಿದ ಅಧಿಕಾರಿಯ ಪುತ್ರ ಅಶ್ವಜಿತ್ ಅನಿಲ್ ಗಾಯಕ್‌ವಾಡ್ ಪ್ರಕರಣದ ತನಿಖೆಗಾಗಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಮರ್ ಸಿಂಗ್ ಜಾಧವ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿತ್ತು. ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಕಾರ್ಯ ನಡೆಸಲಾಗಿದೆ ಎಂದು ಪೊಲೀಸರು ನಿನ್ನೆ (ಭಾನುವಾರ) ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಥಾಣೆ ಪೊಲೀಸ್ ಕಮಿಷನರ್ ಜೈ ಜೀತ್ ಸಿಂಗ್ ಅವರು, ''ಅಶ್ವಜಿತ್ ಅನಿಲ್ ಗಾಯಕ್ವಾಡ್ ಮತ್ತು ಆತನ ಸಹಚರರು ಈ ಘಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಲು ಡಿಸಿಪಿ ಅಮರ್ ಸಿಂಗ್ ಜಾಧವ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಡಿಸಿಪಿ ಮಾಹಿತಿ: ಥಾಣೆ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಯ ಪುತ್ರ ತನ್ನ ಕಾರಿನೊಂದಿಗೆ ತನ್ನ ಗೆಳತಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಈ ವೇಳೆ, ಗಾಯಗೊಂಡ 26 ವರ್ಷದ ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯು ಘೋಡ್‌ಬಂದರ್ ರಸ್ತೆಯ ಹೋಟೆಲ್ ಬಳಿ ನಡೆದಿದೆ" ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ತಿಳಿಸಿದ್ದಾರೆ.
"ಐಪಿಸಿ ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ), 338 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ತೀವ್ರ ನೋವನ್ನುಂಟು ಮಾಡುವುದು) ಅಡಿ ಅಶ್ವಜಿತ್ ಹಾಗೂ ಆರೋಪಿಗಳಾದ ರೋಮಿಲ್ ಪಾಟೀಲ್ ಮತ್ತು ಸಾಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವ ಶಿಕ್ಷೆ), 504 (ಶಾಂತಿ ಭಂಗ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಮತ್ತು 34 ಸೆಕ್ಷನ್ (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿ ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಡಿಸಿಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕ ಕೃತ್ಯ-20 ಸ್ಥಳಗಳಲ್ಲಿ ಎನ್ಐಎ ಶೋಧ: ಬಳ್ಳಾರಿಯ ಕೆಲ ಮಂದಿ ವಶಕ್ಕೆ