ಚೆನ್ನೈ( ತಮಿಳುನಾಡು) : ತಮಿಳುನಾಡು ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ ಮೇಗಲಾ ಅವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದೆ. ಈ ಬಗೆಗಿನ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್ ವಿ ಗಂಗಾಪುರವಾಲಾ, ಜಸ್ಟಿಸ್ ಸಿ ವಿ ಕಾರ್ತಿಕೇಯನ್ ಅವರ ಪೀಠಕ್ಕೆ ವಿಚಾರಣೆ ಹೊಣೆ ಹೊರಿಸಿದ್ದಾರೆ. ಈ ಮೊದಲು ಈ ಸಂಬಂಧ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ವಿಭಜಿತ ತೀರ್ಪು ನೀಡಿತ್ತು.
ಈ ಸಂಬಂಧ ಸೇಂಥಿಲ್ ಅವರ ಪತ್ನಿ ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ವಿಭಜನಾತ್ಮಕ ತೀರ್ಪಿನ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಇತ್ಯರ್ಥ ಪಡಿಸುವಂತೆ ಸೆಂಥಿಲ್ ಪತ್ನಿ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಈ ಸಂಬಂಧದ ಅರ್ಜಿ ಹೈಕೋರ್ಟ್ನಲ್ಲಿ ಇರುವುದರಿಂದ ಅಲ್ಲೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಅರ್ಜಿ ಈಗ ಜಸ್ಟಿಸ್ ಸಿ ವಿ ಕಾರ್ತಿಕೇಯನ್ ಅವರ ಪೀಠದ ಮುಂದೆ ನಿಗದಿ ಮಾಡಲಾಗಿದೆ.
ಜೂನ್ 14 ರಂದು ಉದ್ಯೋಗಕ್ಕಾಗಿ ಹಣ ಪಡೆದ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಾಲಾಜಿಯನ್ನು ಬಂಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಸೆಂಥಿಲ್ ಅವರ ಪತ್ನಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಪೀಠ ವಿಭಿನ್ನ ತೀರ್ಪು ನೀಡಿದ್ದರು. ನ್ಯಾಯಮೂರ್ತಿ ಬಾನು, ಇಡಿಗೆ ಕಸ್ಟಡಿಗೆ ಪಡೆಯುವ ಅಧಿಕಾರ ಇಲ್ಲ ಎಂದರೆ ಮತ್ತೊಬ್ಬ ನ್ಯಾಯಮೂರ್ತಿ ಭರತ್ ಚಕ್ರವರ್ತಿ ಈ ಬಂಧನ ಕಾನೂನು ಬಾಹಿರ ಅಲ್ಲ ಎಂದು ತೀರ್ಪು ನೀಡಿದ್ದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ಅಧಿಕಾರಿಗೆ ಸ್ಟೇಷನ್ ಹೌಸ್ ಆಫೀಸರ್ ಅಧಿಕಾರ ಇಲ್ಲದಿರುವುದರಿಂದ ಅವರು ಸಚಿವರ ಕಸ್ಟಡಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಾನು ತಮ್ಮ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದ್ದರು.
ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ: ಪೀಠದಲ್ಲಿದ್ದ ಎರಡನೇ ನ್ಯಾಯಾಧೀಶರಾದ ಜಸ್ಟಿಸ್ ಡಿ ಭರತ್ ಚಕ್ರವರ್ತಿ ಅವರು ನ್ಯಾಯಮೂರ್ತಿ ಬಾನು ಅವರ ತೀರ್ಪನ್ನು ಒಪ್ಪಿಲ್ಲ. ಈ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ನ್ಯಾಯಮೂರ್ತಿ ಚಕ್ರವರ್ತಿ ಹೇಳಿದ್ದರು.
ಇಂತಹ ವಿಭಿನ್ನ ತೀರ್ಪು ಬಂದಿದ್ದರಿಂದ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ವಾದ - ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ, ಮದ್ರಾಸ್ ಹೈಕೋರ್ಟ್ ತ್ರಿಸದಸ್ಯ ಪೀಠ ರಚನೆ ಮಾಡಿ ವಿಚಾರಣೆ ನಡೆಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿತ್ತು.
ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಪ್ರಕರಣ: ಹೈಕೋರ್ಟ್‌ನಿಂದ ವಿಭಿನ್ನ ತೀರ್ಪು.. ತ್ರಿಸದಸ್ಯ ಪೀಠ ರಚಿಸಲು ಸುಪ್ರೀಂ ಸೂಚನೆ