ಚಿತ್ರಕೂಟ (ಉತ್ತರ ಪ್ರದೇಶ): ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕಿ ಹಾಗೂ ಗುಲಾಬಿ ಗ್ಯಾಂಗ್‌ನ ಕಮಾಂಡರ್ ಸಂಪತ್ ಪಾಲ್ ಅವರು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹಣ ಇರುವ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡಿ ಸ್ಪರ್ಧಿಸಲು ಅನುಮತಿಸಲಾಗಿದೆ ಎಂದು ತಮ್ಮ ಹೇಳಿಕೆಯ ಮೂಲಕ ಅಲೆಯನ್ನೇ ಸೃಷ್ಟಿಸಿದ್ದಾರೆ. ಅಲ್ಲದೇ, ಅಂತಹ ಅಭ್ಯರ್ಥಿಗೆ ಪಕ್ಷದ ಟಿಕೆಟ್ ನೀಡುವಲ್ಲಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ವೀಕ್ಷಕರ ನಡುವೆ 'ಅಂಡರ್-ಟೇಬಲ್-ಡೀಲ್' ನಡೆದಿದೆ ಎಂದು ಪಾಲ್ ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಪಾಲ್ ಮತ್ತು ಬ್ರಾಹ್ಮಣ ಮತಗಳನ್ನು ಕಳೆದುಕೊಳ್ಳಲಿದೆ ಎಂದು ಸಹ ಹೇಳಿದ್ದಾರೆ. ಗುಲಾಬಿ ಗ್ಯಾಂಗ್‌ನ ಕಮಾಂಡರ್ ಸಂಪತ್ ಪಾಲ್ ಅವರು ಈಗ ಬದಿಗೆ ಸರಿದಿದ್ದಾರೆ. ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಕೆಗೆ ಪಕ್ಷದ ಟಿಕೆಟ್ ನಿರಾಕರಿಸಿದ ಕಾರಣ ಈ ಹೇಳಿಕೆಗಳು ಹೊರ ಬಿದ್ದಿವೆ.
ಭಾರತಿ ಲಾಲ್ ಪಾಂಡೆಯನ್ನು ಕಾಂಗ್ರೆಸ್ ಹೋರಾಟಗಾರ್ತಿ ಎಂದು ಕರೆಯುತ್ತದೆ. ಆದರೆ, ಅವಳು ಯಾವ ಅರ್ಥದಲ್ಲಿ ಹೋರಾಟಗಾರ್ತಿ ಎಂದು ಹೇಳಿ? ಅವಳು ಜನರೊಂದಿಗೆ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳಿಸಿಕೊಂಡಿದ್ದಾಳೆ. ಕೇವಲ ಚುನಾವಣಾ ನೌಟಂಕಿ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಹಿಜಾಬ್ ಗಲಭೆ ಸೃಷ್ಟಿಗೆ ಕಾಂಗ್ರೆಸ್, ಎಸ್‍ಡಿಪಿಐ ಕಾರಣ : ಕಟೀಲ್ ಆರೋಪ
ಹಿಂದಿನ ಚುನಾವಣೆಯಲ್ಲಿ ರಂಜನಾ ಭಾರತಿ ಲಾಲ್ ಪಾಂಡೆ ಅವರು 8,000 ಮತಗಳನ್ನು ಗಳಿಸಿದ್ದರು. ಫೆಬ್ರವರಿ 27 ರಂದು ಯುಪಿ ಚುನಾವಣೆಯ ಐದನೇ ಹಂತದ ಸಮಯದಲ್ಲಿ ಮಾಣಿಕಪುರ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಅವರು 6,000 ಮತಗಳನ್ನು ಗಳಿಸಲು ಸಹ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಜೀವನದಲ್ಲಿ ಯಾವತ್ತೂ ಹೋರಾಡದ ಕಾಂಗ್ರೆಸ್ ಅಭ್ಯರ್ಥಿ ರಂಜನಾ ಭಾರತಿ ಅವರು ತಳಮಟ್ಟದ ನಾಯಕರೂ ಅಲ್ಲ. ಮತ ಕೇಳಲು ಬ್ರಾಹ್ಮಣರ ಬಳಿ ಅವರು ಹೋಗುವುದಿಲ್ಲ. ಪರಿಣಾಮ ಕಾಂಗ್ರೆಸ್ ಈ ಚುನಾವಣೆಯಲ್ಲಿ ವಿಶೇಷವಾಗಿ ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಹಿನ್ನಡೆ ಅನುಭವಿಸಲಿದೆ. ಕಾಂಗ್ರೆಸ್ ಪಾಲ್ ಸಮುದಾಯದ ಮತಗಳನ್ನೂ ಸಹ ಕಳೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ನಾನು ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ಪಂಜಾಬ್, ಚಿತ್ರಕೂಟ ಮತ್ತು ದೆಹಲಿಯ ಕಾಂಗ್ರೆಸ್ ನಾಯಕರು ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಮಾಣಿಕ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ದಾಳಿ ನಡೆಸುತ್ತಿದ್ದಾರೆ. ತಳಮಟ್ಟದ ಕಾಂಗ್ರೆಸ್ ನಾಯಕರು ಬದಿಗೆ ಸರಿದಿದ್ದಾರೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಯಾರೀಕೆ:
ಮಹಿಳೆಯರ ಒಂದು ಗುಂಪು ಕಟ್ಟಿಕೊಂಡು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಸಂಪತ್ ಪಾಲ್ ಹಲವು ಬಾರಿ ವಿವಾದಗಳಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ. ಅವರು ಕಲರ್ಸ್ ಟಿವಿಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್‌ನಲ್ಲೂ ಭಾಗವಹಿಸಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ಮೂಲಕ ದೇಶ ಮತ್ತು ವಿಶ್ವದಲ್ಲಿ ವಿಶಿಷ್ಟವಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.