ಗಾಂಧಿನಗರ (ಗುಜರಾತ್): ಬಹುತೇಕ ದಂಪತಿ ಬೇರೆ ಬೇರೆ ಕಾರಣಗಳಿಂದ ಡಿವೋರ್ಸ್ ಪಡೆಯುತ್ತಾರೆ. ಆದರೆ, ಇಲ್ಲೊಂದು ದಂಪತಿ ಶೌಚಾಲಯದ ವಿಚಾರವಾಗಿ ವಿಚ್ಛೇದನ ಪಡೆದಿದೆ. ಹೌದು, ಎಂಟು ವರ್ಷಗಳ ಹಿಂದೆ ಗಾಂಧಿ ನಗರದ ರಂದೇಶನ್ ಗ್ರಾಮದ ಯುವಕನನ್ನು ಯುವತಿ ವರಿಸಿದ್ದರು. ಆದರೆ, ಪತಿಯ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಆಕೆ ವಿಚ್ಛೇದನ ಪಡೆದಿದ್ದಾರೆ.
ಗೌರಿ(ಹೆಸರು ಬದಲಾಯಿಸಲಾಗಿದೆ). ಗೌರಿಯು 10 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಬ್ಯೂಟಿಷಿಯನ್ ಕೋರ್ಸ್ ಮಾಡಿದ್ದರು. ಆಕೆಯ ಗಂಡನ ಮನೆಯವರು ಆರು ಎಕರೆ ಭೂಮಿ ಹೊಂದಿದ್ದು, ತಿಂಗಳಿಗೆ 10 ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದರು. ಇಷ್ಟೆಲ್ಲಾ ಇದ್ದರೂ, ಒಂದು ಶೌಚಾಲಯ ನಿರ್ಮಿಸಿರಲಿಲ್ಲ.
ಶೌಚಾಲಯ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಶೌಚಕ್ಕೆ ಬಯಲಿಗೆ ಹೋಗಲು ಆಗಲ್ಲ ಎಂದು ಗೌರಿ ಮನೆಯವರಿಗೆ ತಿಳಿ ಹೇಳಿದ್ರೂ, ಯಾರೂ ಅವರ ಮಾತಿಗೆ ಕಿಮ್ಮತ್ತು ಕೊಟ್ಟಿರಲಿಲ್ಲ. ಇದರಿಂದಾಗಿ ಬೇಸತ್ತ ಗೌರಿ, ತನ್ನ ತವರು ಮನೆಗೆ ಹೋದರು. ಮತ್ತೆ ರಾಜಿ ಮಾಡಿಕೊಂಡು ಪತಿ ಆಕೆಯನ್ನು ಮನೆಗೆ ಕರೆತಂದ. ಆದರೆ, ನಿತ್ಯ ಆಕೆಗೆ ಚಿತ್ರಹಿಂಸೆ ನೀಡಲು ಶುರು ಮಾಡಿದ. ಇದರಿಂದ ಮನನೊಂದ ಗೌರಿ ಲಂಘ್ನಾಜ್ ಠಾಣೆಗೆ ದೂರು ಕೊಟ್ಟಳು.
ಇದನ್ನೂ ಓದಿ: ಸಿನಿಮೀಯ ಸ್ಟೈಲ್ನಲ್ಲಿ ಬ್ಯಾಂಕ್ ದರೋಡೆ.. 2 ಕೋಟಿ ಮೌಲ್ಯದ ಚಿನ್ನ, 31 ಲಕ್ಷ ರೂ.ದೋಚಿದ ಕಳ್ಳರು
ಪ್ರಕರಣವು ಕೋರ್ಟ್ ಮೆಟ್ಟಿಲೇರಿದ್ದು, ಮೂರು ವರ್ಷಗಳ ಕಾಲ ವಿಚಾರಣೆ ನಡೆಯಿತು. ಅಕ್ಟೋಬರ್ 20, 2001 ರಂದು ಕೋರ್ಟ್ ಗೌರಿ ಪರ ತೀರ್ಪು ನೀಡಿತು. ಆಕೆಯ ಪತಿ ಗೌರಿಗೆ ಆರು ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿತು. ಸದ್ಯ ಆಕೆ ಗಾಂಧಿನಗರದಲ್ಲಿ ವಾಸವಾಗಿದ್ದು, ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದಾಳೆ.