ಅಹಮದಾಬಾದ್: ಡೆಡ್ಲಿ ವೈರಸ್ ಕೊರೊನಾ ಸಂಕಷ್ಟದ ಮಧ್ಯೆ ಗುಜರಾತ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಜುಲೈ 1ರಿಂದ 12ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿದೆ.
ಎರಡು ದಿನಗಳ ಹಿಂದೆ ಕೇಂದ್ರ ಶಿಕ್ಷಣ ಸಚಿವರೊಂದಿಗೆ ನಡೆದ ಚರ್ಚೆಯಲ್ಲಿ ಎಲ್ಲ ರಾಜ್ಯಗಳು ಪರೀಕ್ಷಾ ವಿಚಾರವಾಗಿ ತಮ್ಮ ಅಂತಿಮ ನಿರ್ಧಾರ ತಿಳಿಸುವಂತೆ ಸೂಚನೆ ನೀಡಲಾಗಿತ್ತು. ಹೀಗಾಗಿ ತಮ್ಮ ನಿಲುವು ಏನು ಎಂಬುದನ್ನ ತಿಳಿಸಲು ಇಂದು ಕೊನೆಯ ದಿನವಾಗಿತ್ತು. ಇದರ ಬೆನ್ನಲ್ಲೇ ಗುಜರಾತ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ವಿಜ್ಞಾನ ವಿಭಾಗ ಸೇರಿದಂತೆ 6.83 ಲಕ್ಷ ವಿದ್ಯಾರ್ಥಿಗಳು ಈ ಸಲದ ಪರೀಕ್ಷೆ ಬರೆಯಲಿದ್ದು, ಈ ವೇಳೆ ಎಲ್ಲ ರೀತಿಯ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿಜಯ್ ರೂಪಾನಿ ಇಂದು ಅಲ್ಲಿನ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಈ ವೇಳೆ ಶಿಕ್ಷಣ ಸಚಿವ ಭೂಪೇಂದ್ರ ಸಿನ್ಹಾ ಚೌಂಡಾಸಮ್ ಉಪಸ್ಥಿತರಿದ್ದರು.
ಮುಂದಿನ ಕೆಲ ದಿನಗಳಲ್ಲಿ ಪರೀಕ್ಷೆಯ ವೇಳಾಪಟ್ಟಿ ರಿಲೀಸ್ ಮಾಡಲಾಗುವುದು ಎಂದಿರುವ ಅವರು, 1.40 ಲಕ್ಷ ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಹಾಗೂ 5.43 ಲಕ್ಷ ವಿದ್ಯಾರ್ಥಿಗಳು ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಒಂದು ಪರೀಕ್ಷಾ ಹಾಲ್ನಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಇದೇ ಕಾರಣಕ್ಕಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯಲ್ಲಿ ಏರಿಕೆ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿನ 12ನೇ ತರಗತಿ ಪರೀಕ್ಷೆ ರದ್ಧು ಮಾಡಬೇಕೆಂದು ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಹ ಸಲ್ಲಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕೆಲವೊಂದು ರಾಜ್ಯಗಳು ಪರೀಕ್ಷೆ ನಡೆಸಲು ಮುಂದಾಗುತ್ತಿವೆ.
ಇದನ್ನೂ ಓದಿ: ಜೂನ್ 1ರಿಂದ 12ನೇ ತರಗತಿ ಪರೀಕ್ಷೆ... ಮನೆಯಿಂದಲೇ ಬರೆಯಲು ಅವಕಾಶ
ಛತ್ತೀಸ್ಗಢ ಸೆಕೆಂಡರಿ ಎಜುಕೇಶನ್ ಬೋರ್ಡ್(CGBSE) ಈಗಾಗಲೇ ಜೂನ್ 1ರಿಂದ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಮನೆಯಿಂದಲೇ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಜೂನ್ 1ರಿಂದ 5ರವರೆಗೆ ಈ ಪರೀಕ್ಷಾ ಬುಕ್ಲೆಟ್ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದಾದರೂ ದಿನ ಇವುಗಳನ್ನ ಪಡೆದುಕೊಂಡು ಪರೀಕ್ಷೆ ಬರೆಯಬಹುದಾಗಿದೆ.