ನವದೆಹಲಿ: ಕೇಂದ್ರದ ವಿವಿಧ ಯೋಜನೆಗಳ ಜಾಹೀರಾತುಗಳಿಗಾಗಿ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 1,700 ಕೋಟಿ ರೂಪಾಯಿ ಖರ್ಚು ಮಾಡಿದ್ದಾಗಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.
ಪ್ರತಿಪಕ್ಷಗಳು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್, ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿನ ಜಾಹೀರಾತಿಗೋಸ್ಕರ ಕಳೆದ ಮೂರು ವರ್ಷಗಳಲ್ಲಿ 1,700 ಕೋಟಿ ರೂ. ವ್ಯಯ ಮಾಡಿರುವ ಮಾಹಿತಿ ನೀಡಿದ್ದಾರೆ. 2018-19ರಿಂದ 2020-21ರ ಅವಧಿಯಲ್ಲಿ 1,698.98 ಕೋಟಿ ರೂ. ಬಳಕೆಯಾಗಿದೆ ಎಂದರು.
ಲಿಖಿತ ರೂಪದಲ್ಲಿ ಕೇಂದ್ರ ಸಚಿವರು ಈ ಮಾಹಿತಿ ನೀಡಿದ್ದು, ಮುದ್ರಣ, ದೃಶ್ಯ ಹಾಗೂ ಹೊರಾಂಗಣ ಮಾಧ್ಯಮಗಳ ಮೂಲಕ ದೂರದ ಪ್ರದೇಶಗಳಲ್ಲಿರುವ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂಬ ಮಾಹಿತಿ ನೀಡಿದರು. ಫಲಾನುಭವಿಗಳು ಸರ್ಕಾರದ ಯೋಜನೆಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಾಹೀರಾತು ನೀಡಲಾಗುತ್ತಿದೆ ಎಂದಿರುವ ಸಚಿವರು, ಪತ್ರಿಕೆಗಳಲ್ಲಿನ ಜಾಹೀರಾತಿಗಾಗಿ 826.5 ಕೋಟಿ ರೂ ವೆಚ್ಚ ಮಾಡಿದೆ ಎಂದರು.
2020-21ರಲ್ಲಿ 6,085 ಪತ್ರಿಕೆಗಳಲ್ಲಿನ ಜಾಹೀರಾತಿಗಾಗಿ 118.59 ಕೋಟಿ ರೂ., 2019-20ರಲ್ಲಿ 5,365 ಪತ್ರಿಕೆಗಳಲ್ಲಿ ಜಾಹೀರಾತಿಗೋಸ್ಕರ 200 ಕೋಟಿ ರೂ. ಮತ್ತು 2018-19ರಲ್ಲಿ 6,119 ಪತ್ರಿಕೆಯಲ್ಲಿನ ಜಾಹೀರಾತುಗಳಿಗಾಗಿ 507.9 ಕೋಟಿ ರೂ. ಖರ್ಚು ಮಾಡಿರುವ ಮಾಹಿತಿ ನೀಡಿದರು. ಇನ್ನು ದೃಶ್ಯ ಮಾಧ್ಯಮಗಳಲ್ಲಿನ ಜಾಹೀರಾತುಗೋಸ್ಕರ ಕೇಂದ್ರ 193.52 ಕೋಟಿ ರೂ. ಖರ್ಚು ಮಾಡಿದೆ.