ಗೋರಖ್‌ಪುರ (ಉತ್ತರ ಪ್ರದೇಶ): ಮದುವೆಯ ನೆಪದಲ್ಲಿ ಯುವಕನಿಗೆ ನನ್ನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬಳು, ನನ್ನ ಹೆತ್ತ ತಾಯಿ ಹಾಗೂ ಆಕೆಯ ಸ್ನೇಹಿತೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹರಿಯಾಣದ ಮೂಲದ ಈ ಯುವತಿ, ಮಾರಾಟದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗೋರಖ್‌ಪುರಕ್ಕೆ ಬಂದಿರುವುದಾಗಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆದರೆ, ದೂರಿನಲ್ಲಿ ಯುವತಿ ತನ್ನ ವಿಳಾಸ, ಸಂಪರ್ಕ ಸಂಖ್ಯೆ ನಮೂದಿಸಿಲ್ಲ. ಸದ್ಯ ತಲೆಮರೆಸಿಕೊಂಡಿರುವ ಈ ಯುವತಿಯ ಜಾಡು ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಯುವತಿಯ ದೂರಿನ ಪ್ರಕಾರ, ಹರಿಯಾಣದ ಚಿಲುತಾಲ್ ಪ್ರದೇಶದಲ್ಲಿ ನೆರೆಮನೆಯವರು ಬಡ ಕುಟುಂಬಗಳ ಹುಡುಗಿಯರ ಮದುವೆಯನ್ನು ಏರ್ಪಡಿಸುತ್ತಾರೆ. ತನ್ನ ಆರು ಸಹೋದರಿಯರಲ್ಲಿ ಇಬ್ಬರು ನೆರೆಹೊರೆಯವರ ನಿಶ್ಚಯದಂತೆ ಈಗಾಗಲೇ ಮದುವೆಯಾಗಿದ್ದರು. ತಾನು ಸಹ ತಾಯಿಯ ಕೋರಿಕೆಯ ಮೇರೆಗೆ ನವೆಂಬರ್ 23ರಂದು ಆಕೆಯ ಹೇಳಿದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ. ಇದಕ್ಕಾಗಿ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ. ಇಡೀ ಕಾಲೋನಿಯಲ್ಲಿ ಮದುವೆಯ ಮೆರವಣಿಗೆ ಸಹ ಆಯೋಜಿಸಲಾಗಿತ್ತು.
ಆದರೆ, ಮದುವೆಯಾದ ಸುಮಾರು 20 ದಿನಗಳ ಬಳಿಕ ಆಕೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಪತಿ ಆಕೆಯನ್ನು ಹೊಡೆಯಲು ಪ್ರಾರಂಭಿಸಿದ್ದ. ಜೊತೆಗೆ ಅಸಭ್ಯ ಕೃತ್ಯಗಳನ್ನು ಮಾಡುವಂತೆ ಒತ್ತಾಯಿಸತೊಡಗಿದ್ದ. ಈ ವೇಳೆ, ತನ್ನ ತಾಯಿ ಮತ್ತು ಆಕೆಯ ಸ್ನೇಹಿತೆ ಹಣಕ್ಕಾಗಿ ಮಾರಾಟ ಮಾಡಿರುವುದು ಆಕೆಗೆ ಅರಿವಾಗಿದೆ. ಆದ್ದರಿಂದ ತನ್ನ ಜೀವ ಉಳಿಸಿಕೊಳ್ಳಲು ಯುವತಿ ಹರಿಯಾಣದಿಂದ ಗೋರಖ್‌ಪುರಕ್ಕೆ ಓಡಿ ಬಂದು ದೂರು ದಾಖಲಿಸಿದ್ದಾಳೆ. ಆದರೆ, ಈ ದೂರು ದಾಖಲಿಸಿದ ಬಳಿಕ ಆಕೆ ನಾಪತ್ತೆಯಾಗಿದ್ದಾಳೆ.
ಯುವತಿಯ ಪತ್ತೆಗೆ ಹಿರಿಯ ಪೊಲೀಸ್ ಅಧೀಕ್ಷಕರ ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ, ಪೊಲೀಸರಿಗೆ ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ ಗೋರಖ್‌ಪುರ ಪೊಲೀಸರು ಪ್ರಕರಣವನ್ನು ಚಿಲುತಾಲ್ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಈಗ ಇಲ್ಲಿನ ಪೊಲೀಸರು ಸಹ ತನಿಖೆ ಪ್ರಾರಂಭಿಸಿದ್ದಾರೆ. ಆದರೆ, ಮೊಹರಿಪುರ ವಾರ್ಡ್‌ನ ಆಶ್ರಯ ಕಾಲೋನಿಯಲ್ಲಿ ವಾಸಿಸುವ ಯುವತಿಯ ಪೋಷಕರು ಸಹ ತನಿಖೆಗೆ ಸಹಕರಿಸುತ್ತಿಲ್ಲ. ಯುವತಿಯ ಆರೋಪವನ್ನು ಪತಿ ಸಹ ತಳ್ಳಿ ಹಾಕಿದ್ದಾರೆ. ಯುವತಿ ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ಎಸ್‌ಎಸ್‌ಪಿ ಡಾ.ಗೌರವ್ ಗ್ರೋವರ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ತಾಳಿ ಕಟ್ಟುತ್ತಿದ್ದಾಗ ಮದುವೆ ನಿರಾಕರಿಸಿದ ವಧು!